ADVERTISEMENT

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಗೆ ಸಂಚು: ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 12:08 IST
Last Updated 31 ಅಕ್ಟೋಬರ್ 2021, 12:08 IST
   
ಶ್ರೀನಗರ: ಭಯೋತ್ಪಾದನಾ ದಾಳಿಗೆ ಸಂಚು ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಶನಿವಾರ ಇಶ್ಫಾಕ್ ವಾನಿ ಮತ್ತು ಉಮರ್ ಭಟ್ ಎಂಬುವರನ್ನು ಬಂಧಿಸಿದೆ.
‘ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಪ್ರಮುಖ ನಗರಗಳಲ್ಲಿ ಲಷ್ಕರ್ ಎ ತಯಬಾ (ಎಲ್‌ಇಟಿ), ಜೈಷ್– ಎ– ಮೊಹಮ್ಮದ್ (ಜೆಇಎಂ), ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ), ಅಲ್ ಬದ್ರ ಮತ್ತು ಅವುಗಳ ಅಂಗಸಂಸ್ಥೆಗಳಾದ ರೆಸಿಸ್ಟೆಟನ್ಸ್ ಫ್ರಂಟ್ (ಆಆರ್‌ಎಫ್‌), ಪೀಪಲ್ ಅಗೇನ್‌ಸ್ಟ್ ಫ್ಯಾಸಿಸ್ಟ್ ಫೋರ್ಸಸ್ (ಪಿಎಎಫ್‌ಎಫ್‌) ಸಂಘಟನೆಗಳು ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿದ್ದವು’ ಎಂದು ಎನ್‌ಐಎ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡು, ಅ. 10ರಿಂದ ತನಿಖೆ ಆರಂಭಿಸಿತ್ತು. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಬಂಧಿಸಲಾಗಿದೆ.
‘ಆರೋಪಿಗಳು ವಿವಿಧ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದರು. ಅಲ್ಲದೆ ಭಯೋತ್ಪಾದಕರಿಗೆ ಸಾರಿಗೆ ಸೇರಿದಂತೆ ಇತರ ವಿಷಯಗಳಲ್ಲಿ ಬೆಂಬಲವನ್ನು ನೀಡುತ್ತಿದ್ದರು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದೂ ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.