ADVERTISEMENT

ಜೆಜೆಎಂ: ಸ್ಥಳೀಯ ಮಾಲೀಕತ್ವಕ್ಕೆ ಒತ್ತು- ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ

ಜಿಲ್ಲಾಧಿಕಾರಿಗಳೊಂದಿಗಿನ ಸಂವಾದಲ್ಲಿ ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ ಮೀನಾ ಹೇಳಿಕೆ

ಪಿಟಿಐ
Published 14 ಅಕ್ಟೋಬರ್ 2025, 16:17 IST
Last Updated 14 ಅಕ್ಟೋಬರ್ 2025, 16:17 IST
   

ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಲ್ಲಿ ನೀರು ಪೂರೈಕೆ ಖಾತ್ರಿಪಡಿಸುವ ಜಲಜೀವನ ಮಿಷನ್‌ನ(ಜೆಜೆಎಂ) ಮುಂದಿನ ಹಂತದಲ್ಲಿ ಈ ಯೋಜನೆಯ ಮಾಲೀಕತ್ವವನ್ನು ಸಮುದಾಯಕ್ಕೆ ವಹಿಸಲಾಗುವುದು ಹಾಗೂ ಈ ಕಾರ್ಯಕ್ಕೆ ಸಾಂಸ್ಥಿಕ ರೂಪ ನೀಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಜಲ ಶಕ್ತಿ ಸಚಿವಾಲಯ ಮಂಗಳವಾರ ಹೇಳಿದೆ.

‘ಉತ್ತರದಾಯಿತ್ವ ನಿಗದಿ ಹಾಗೂ ಸ್ಥಳೀಯ ಆಡಳಿತವನ್ನು ಉತ್ತೇಜಿಸುವ ಮೂಲಕ ಈ ಯೋಜನೆ ಬಹುಕಾಲ ಉಳಿದುಕೊಳ್ಳುವಂತೆ ಮಾಡುವಲ್ಲಿ ಜಿಲ್ಲಾಡಳಿತಗಳ ಪಾತ್ರ ಮಹತ್ವದ್ದು’ ಎಂದು ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ ಅಶೋಕ ಕೆ.ಕೆ.ಮೀನಾ ಹೇಳಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು(ಡಿಡಿಡಬ್ಲುಎಸ್‌) ವರ್ಚುವಲ್‌ ವಿಧಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ADVERTISEMENT

‘ಪ್ರತಿಯೊಂದು ಜಿಲ್ಲೆಯೂ ತನ್ನ ವ್ಯಾಪ್ತಿಯಲ್ಲಿ ಎದುರಿಸುವ ಸಮಸ್ಯೆಗಳಿಗೆ ತನ್ನದೇ ಪರಿಹಾರ ಹೊಂದಿರುತ್ತದೆ. ಇಂತಹ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನು ಗುರುತಿಸುವುದು ಹಾಗೂ ಆ ಮಾದರಿಗಳನ್ನು ವಿವಿಧ ರಾಜ್ಯಗಳಿಗೆ ಸಂಬಂಧಿಸಿ ನೀತಿ ನಿರೂಪಣೆಯಲ್ಲಿ ಬಳಸಿಕೊಳ್ಳಲು ಈ ಸಂವಾದ ಸಹಕಾರಿ’ ಎಂದರು.

ಯೋಜನೆ ಅನುಷ್ಠಾನದಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಜೆಜೆಎಂ ಜಂಟಿ ಕಾರ್ಯದರ್ಶಿ ಸ್ವಾತಿ ಮೀನಾ ನಾಯ್ಕ ಪ್ರಾತ್ಯಕ್ಷಿಕೆ ನೀಡಿದರು. ಯೋಜನೆಯ ನಿರ್ದೇಶಕ ಹಾಗೂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕಮಲ್‌ಕಿಶೋರ್ ಸೋನ್ ಕೂಡ ಮಾತನಾಡಿದರು.