ADVERTISEMENT

ಜೆಎನ್‌ಯು ಹಾಸ್ಟೆಲ್ ವಾರ್ಡನ್ ರಾಜೀನಾಮೆ: ಭದ್ರತೆ ಒದಗಿಸಲು ಆಗಲಿಲ್ಲ ಎಂಬ ಬೇಸರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 8:14 IST
Last Updated 6 ಜನವರಿ 2020, 8:14 IST
ಸಬರಮತಿ ಹಾಸ್ಟೆಲ್‌ನಲ್ಲಿ ದಾಳಿ ನಂತರದ ಚಿತ್ರಣ
ಸಬರಮತಿ ಹಾಸ್ಟೆಲ್‌ನಲ್ಲಿ ದಾಳಿ ನಂತರದ ಚಿತ್ರಣ   
""

ನವದೆಹಲಿ: ಮುಸುಕುಧಾರಿ ಗುಂಪಿನ ಥಳಿತದಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಾಬರ್‌ಮತಿ ವಿದ್ಯಾರ್ಥಿ ನಿಲಯದ ಹಿರಿಯ ವಾರ್ಡನ್ ಆರ್‌. ಮೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ವಿದ್ಯಾರ್ಥಿ ವಿಭಾಗದ ಮುಖ್ಯಸ್ಥರಿಗೆ (ಡೀನ್) ಕೈಬರಹದ ಪತ್ರವನ್ನು ರವಾನಿಸಿರುವ ಅವರು, ‘ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ಪ್ರಯೋಜನವಾಗಲಿಲ್ಲ’ ಎಂದು ವಿಷಾದಿಸಿದ್ದಾರೆ.

ಜೆಎನ್‌ಯು ಹಾಸ್ಟೆಲ್ ವಾರ್ಡನ್ ರಾಜೀನಾಮೆ ಪತ್ರ.

ಜೆಎನ್‌ಯು ಕ್ಯಾಂಪಸ್‌ನ ಪ್ರಮುಖ ಹಾಸ್ಟೆಲ್ ಆಗಿರುವ ಸಾಬರ್‌ಮತಿಯಲ್ಲಿಸುಮಾರು 400 ವಿದ್ಯಾರ್ಥಿಗಳಿದ್ದಾರೆ. ಮುಸುಕುಧಾರಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಾಳಿಯ ಬಳಿಕ ಸಬರಮತಿ ಹಾಸ್ಟೆಲ್‌ನ ಪ್ರತಿ ಮಹಡಿಯಲ್ಲೂ ಗಾಜಿನ ಚೂರುಗಳು, ಒಡೆದ ಬಾಗಿಲು, ಕಿಟಕಿ ಮತ್ತು ಪೀಠೋಪಕರಣಗಳು ಕಂಡುಬಂದವು.
ಸುಮಾರು ಮೂರು ಗಂಟೆಗಳು ನಡೆದ ದಾಳಿಯಲ್ಲಿ ಮುಸುಕುಧಾರಿ ಗುಂಪು ವಿವಿ ಆವರಣದಲ್ಲಿಯೇ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಕಂಡಕಂಡವರ ಮೇಲೆ ದಾಳಿ ನಡೆಸಿ ಬಾಟಲ್‌ಗಳನ್ನು ಎಸೆದಿದ್ದರು.

ADVERTISEMENT

ಹಾಸ್ಟೆಲ್‌ನಿಂದ ಹಾಸ್ಟೆಲ್‌ಗೆ ಪ್ರವೇಶಿಸಿದ್ದ ಮುಸುಕುಧಾರಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಿರಂತರ ದಾಳಿ ನಡೆಸಿದ್ದರು. ಘಟನೆಯಲ್ಲಿ ಸುಮಾರು 35 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಾಯಗೊಂಡಿದ್ದಾರೆ.

ದಾಳಿಯ ಹಿಂದೆ ಬಿಜೆಪಿ ಬೆಂಬಲಿತಎಬಿವಿಪಿ ಸಂಘಟನೆಯಕೈವಾಡವಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕರು ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.