ನವದೆಹಲಿ: ಮರಾಠಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಕ್ಕಾಗಿ ಕುಸುಮಾಗ್ರಜ್ ವಿಶೇಷ ಕೇಂದ್ರ ಹಾಗೂ ಭದ್ರತೆ ಮತ್ತು ಕಾರ್ಯತಂತ್ರ ಕುರಿತ ಅಧ್ಯಯನಕ್ಕಾಗಿ ಶಿವಾಜಿ ಮಹಾರಾಜ ವಿಶೇಷ ಕೇಂದ್ರಗಳನ್ನು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯವು (ಜೆಎನ್‌ಯು) ನೂತನವಾಗಿ ಆರಂಭಿಸಲಿದೆ.
ಈ ಕೇಂದ್ರಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್ ಗುರುವಾರ ಲೋಕಾರ್ಪಣೆಗೊಳಿಸಲಿದ್ದಾರೆ.
‘ಹೊಸ ಅಧ್ಯಯನ ಕೇಂದ್ರಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರತಿಬಿಂಬವಾಗಿವೆ. ಭಾರತೀಯ ಜ್ಞಾನ ಮತ್ತು ಭಾಷೆಗಳನ್ನು ಪ್ರಚುರಪಡಿಸಲು ಜೆಎನ್‌ಯು ಬದ್ಧವಾಗಿದೆ’ ಎಂದು ಜೆಎನ್‌ಯು ಕುಲಪತಿ ಸಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ತಿಳಿಸಿದ್ದಾರೆ.
‘ಕುಸುಮಾಗ್ರಜ್ ಅಧ್ಯಯನ ಕೇಂದ್ರದ ಮೂಲಕ ಸ್ನಾತಕೋತ್ತರ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪಡೆಯಬಹುದು. ಸ್ನಾತಕೋತ್ತರ ಪದವಿ ಅಥವಾ ಪಿ.ಎಚ್‌ಡಿ ಅಧ್ಯಯನ ಮಾಡುತ್ತಿರುವವರು ಅದರ ಜೊತೆಗೆ ಮರಾಠಿ ಭಾಷೆಯ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು. ಎಲ್ಲ ರಾಜ್ಯದವರು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದ್ದಾರೆ.
‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವಿಶೇಷ ಅಧ್ಯಯನ ಕೇಂದ್ರವು ಮರಾಠ ಸಾಮ್ರಾಜ್ಯದಲ್ಲಿದ್ದ ದೇಶಿ ಕಾರ್ಯತಂತ್ರಗಳ ಬಗ್ಗೆ ಗಮನಹರಿಸಲಿದೆ. ಸೇನೆಯ ಇತಿಹಾಸ, ಕಾರ್ಯತಂತ್ರ ಮತ್ತು ಆಧಾರ ಆಧಾರದಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸುವ ಬಗ್ಗೆ ಇಲ್ಲಿ ಅಧ್ಯಯನ ನಡೆಯಲಿದೆ ’ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.