ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣಾ ಸಮಿತಿಯು 2025–26ನೇ ಸಾಲಿನ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ನವೆಂಬರ್ 4ರಂದು ಮತದಾನ ನಡೆಯಲಿದ್ದು, ಎರಡು ದಿನಗಳ ಬಳಿಕ (ನವೆಂಬರ್ 6ರಂದು) ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಪ್ರಕ್ರಿಯೆಗಳು ಅಕ್ಟೋಬರ್ 24ರಂದು ಪ್ರಾರಂಭವಾಗಲಿವೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಾತ್ಕಾಲಿಕ ಮತದಾರರ ಪಟ್ಟಿಯ ಪ್ರದರ್ಶನ ಮಾಡಲಾಗುವುದು ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ನಾಮಪತ್ರದ ಅರ್ಜಿಗಳನ್ನು ಅಕ್ಟೋಬರ್ 25ರಂದು ಮಧ್ಯಾಹ್ನ 2ರಿಂದ 5ರವರೆಗೆ ವಿತರಿಸಲಾಗುವುದು. ಅಭ್ಯರ್ಥಿಗಳು ಅಕ್ಟೋಬರ್ 27 ರಂದು ನಾಮಪತ್ರ ಸಲ್ಲಿಸಬಹುದು. ಪರಿಶೀಲನೆ ಬಳಿಕ ಅಕ್ಟೋಬರ್ 28ರಂದು ಮಾನ್ಯ ನಾಮಪತ್ರಗಳನ್ನು ಪ್ರದರ್ಶಿಸಲಾಗುವುದು. ಅದೇ ದಿನ ಸಂಜೆಯೊಳಗೆ ಕಣದಿಂದ ಹಿಂದೆ ಸರಿಯಲು ಅವಕಾಶವಿದೆ. ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ರಾತ್ರಿ 7ಕ್ಕೆ ಪ್ರಕಟಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.