ADVERTISEMENT

ಜೆಎನ್‌ಯು ಕುಲಪತಿಯೇ ದಾಳಿಯ ಸೂತ್ರಧಾರ: ಕಾಂಗ್ರೆಸ್ ಆರೋಪ

ಕಾಂಗ್ರೆಸ್‌ನ ಸತ್ಯಶೋಧನಾ ತಂಡದಿಂದ ಆರೋಪ: ಉಚ್ಚಾಟನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 1:57 IST
Last Updated 13 ಜನವರಿ 2020, 1:57 IST
ಸುಷ್ಮಿತಾ ದೇವ್‌
ಸುಷ್ಮಿತಾ ದೇವ್‌   

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಭೀಕರ ದಾಳಿಗೆ ಕುಲಪತಿ ಎಂ. ಜಗದೀಶಕುಮಾರ್ ಅವರೇ ಮುಖ್ಯಸೂತ್ರಧಾರ ಎಂದು ಕಾಂಗ್ರೆಸ್‌ನ ಸತ್ಯಶೋಧನಾ ತಂಡ ಭಾನುವಾರ ಅರೋಪಿಸಿದೆ.

ಅಲ್ಲದೆ, ಅವರನ್ನು ಕೂಡಲೇ ಕುಲಪತಿ ಹುದ್ದೆಯಿಂದ ಉಚ್ಚಾಟಿಸಬೇಕು ಎಂದು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌, ರಾಜ್ಯಸಭಾ ಸದಸ್ಯ ಸೈಯದ್‌ ನಾಸಿರ್‌ ಹುಸೇನ್‌, ಲೋಕಸಭಾ ಸದಸ್ಯೆ ಹಿಬಿ ಈಡೆನ್‌ ಹಾಗೂ ದೆಹಲಿ ವಿಶ್ವವಿದ್ಯಾಲಯದ ಅಧ್ಯಕ್ಷೆ ಅಮೃತಾ ಧವನ್‌ ಅವರನ್ನು ಒಳಗೊಂಡ ತಂಡ ಆಗ್ರಹಿಸಿದೆ.

‘ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಸರ್ಕಾರ ಪ್ರಾಯೋಜಿತ ಕೃತ್ಯ. ಹೀಗಾಗಿ ಈ ಘಟನೆ ಕುರಿತಂತೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ತಂಡದ ಮುಖ್ಯಸ್ಥೆ ಸುಷ್ಮಿತಾ ದೇವ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

ಈ ತಂಡ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶನಿವಾರ ತನ್ನ ವರದಿಯನ್ನು ಸಲ್ಲಿಸಿದೆ.

‘ಕುಲಪತಿ ಜಗದೀಶಕುಮಾರ್‌, ಹಿಂಸಾಚಾರ ನಡೆಸಿದವರೊಂದಿಗೆ ಕೈಜೋಡಿಸಿರುವ ಬೋಧಕರು ಹಾಗೂ ಭದ್ರತಾ ವ್ಯವಸ್ಥೆ ಒದಗಿಸಿದ್ದ ಸಂಸ್ಥೆ ವಿರುದ್ಧವೂ ತನಿಖೆ ನಡೆಯಬೇಕು’ ಎಂದು ದೇವ್‌ ಆಗ್ರಹಿಸಿದರು.

‘ತಮ್ಮ ವಿಚಾರಧಾರೆ ಒಪ್ಪುವ ಹಾಗೂ ಬಲಪಂಥೀಯ ಸಿದ್ಧಾಂತದತ್ತ ಒಲವು ಉಳ್ಳವರಿಗೆಜಗದೀಶಕುಮಾರ್ ಪ್ರೋತ್ಸಾಹ ನೀಡಿ, ಬೆಳೆಸಿದ್ದಾರೆ’ ಎಂದು ದೂರಿದರು.

‘ಜಗದೀಶ್‌ಕುಮಾರ್‌ ಕುಲಪತಿಯಾದ ನಂತರ ನಡೆದ ನೇಮಕಾತಿ ಬಗ್ಗೆ ಸಂಶಯವಿದೆ. 2016ರ ಜನವರಿ 27ರಿಂದ ಇಲ್ಲಿ ವರೆಗೆ ನಡೆದಿರುವ ನೇಮಕಾತಿ, ಹಣಕಾಸು ಮತ್ತು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು’ ಎಂದರು.

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಸಹಜ ಸ್ಥಿತಿ ಮರಳುವಂತೆ ಮಾಡುವುದಕ್ಕಾಗಿ ಹಾಸ್ಟೆಲ್‌ ಶುಲ್ಕ ಏರಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದವರೆಗೆ ಮುಂದೂಡಬೇಕು ಎಂದು ಸರ್ಕಾರ ನೇಮಿಸಿರುವ ಮೂವರು ಸದಸ್ಯರ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ.

ಶುಲ್ಕ ಇಳಿಕೆಗೆ ಶಿಫಾರಸು

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾಜಿ ಮುಖ್ಯಸ್ಥ ವಿ.ಎಸ್‌. ಚೌಹಾಣ್‌ ನೇತೃತ್ವದ ಸಮಿತಿಯು 2019ರ ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವಿ.ವಿಯ ನಿಯಮಗಳಲ್ಲಿ ಯಾವುದೇ ಬದಲಾವಣೆ ತರುವ ಮೊದಲು ಸಂಬಂಧಪಟ್ಟ ಎಲ್ಲರ ಜತೆಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.