ADVERTISEMENT

ಕೋವಿಡ್ ಲಸಿಕೆಯ ತ್ವರಿತ ಅನುಮೋದನೆ ಪ್ರಸ್ತಾವ ಹಿಂಪಡೆದ ಜಾನ್ಸನ್ & ಜಾನ್ಸನ್

ರಾಯಿಟರ್ಸ್
Published 2 ಆಗಸ್ಟ್ 2021, 10:47 IST
Last Updated 2 ಆಗಸ್ಟ್ 2021, 10:47 IST
ಸಾಂದರ್ಭಿಕ ಚಿತ್ರ (ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ರಾಯಿಟರ್ಸ್)   

ನವದೆಹಲಿ: ಕೋವಿಡ್ ಲಸಿಕೆಯ ತ್ವರಿತ ಅನುಮೋದನೆಗಾಗಿ ಸಲ್ಲಿಸಿದ್ದ ಪ್ರಸ್ತಾವವನ್ನು ಜಾನ್ಸನ್ & ಜಾನ್ಸನ್ ಕಂಪನಿಯು ಹಿಂಪಡೆದುಕೊಂಡಿದೆ ಎಂದು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ (ಸಿಡಿಎಸ್‌ಸಿಒ) ತಿಳಿಸಿದೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.

ಅಮೆರಿಕ ಮೂಲದ ಕಂಪನಿಯು ಭಾರತದಲ್ಲಿ ಲಸಿಕೆಯ ಕ್ಲಿನಿಕಲ್ ಅಧ್ಯಯನ ನಡೆಸುವುದಕ್ಕೆ ಸಂಬಂಧಿಸಿ ಏಪ್ರಿಲ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ರಕ್ತ ಹೆಪ್ಪುಗಟ್ಟುವಿಕೆಯ ವಿರಳ ಪ್ರಕರಣಗಳು ವರದಿಯಾಗಿದ್ದರಿಂದ ಆ ಸಂದರ್ಭದಲ್ಲಿ ಅಮೆರಿಕದಲ್ಲಿ ಕ್ಲಿನಿಕಲ್ ಟ್ರಯಲ್‌ ಅನ್ನು ಸ್ಥಗಿತಗೊಳಿಸಲಾಗಿತ್ತು.

ನಷ್ಟ ಪರಿಹಾರದ ವಿಚಾರದಲ್ಲಿ ಭಾರತದಲ್ಲಿ ಕಾನೂನು ಸವಾಲುಗಳು ಎದುರಾಗುತ್ತಿರುವ ಬೆನ್ನಲ್ಲೇ ಕಂಪನಿಯು ಪ್ರಸ್ತಾವವನ್ನು ವಾಪಸ್ ಪಡೆದಿದೆ. ನಷ್ಟ ಪರಿಹಾರ ವಿಷಯವಾಗಿ ಲಸಿಕೆ ತಯಾರಕರೊಂದಿಗೆ ಚರ್ಚಿಸಲು ತಂಡವೊಂದನ್ನು ರಚಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ರಾಜ್ಯ ಖಾತೆ ಸಚಿವರು ಕಳೆದ ವಾರ ತಿಳಿಸಿದ್ದರು.

‘ತಂಡವು ಫೈಜರ್, ಮೊಡೆರ್ನಾ ಹಾಗೂ ಜಾನ್ಸನ್ & ಜಾನ್ಸನ್ ಕಂಪನಿಗಳ ಜತೆ ನಷ್ಟ ಪರಿಹಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತುಕತೆ ನಡೆಸುತ್ತಿದೆ’ ಎಂದು ಸಚಿವೆ ಭಾರತಿ ಪವಾರ್ ತಿಳಿಸಿದ್ದರು.

ಪ್ರಸ್ತಾವ ಹಿಂಪಡೆದ ಬಗ್ಗೆ ಜಾನ್ಸನ್ & ಜಾನ್ಸನ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಸಿಡಿಎಸ್‌ಸಿಒ ಕೂಡ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.