ADVERTISEMENT

ಜೋಶಿಮಠ ಪರಿಸ್ಥಿತಿ ನಿಭಾಯಿಸಲು ಯೋಜನೆ: ಪಿಎಂಒ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 2:46 IST
Last Updated 9 ಜನವರಿ 2023, 2:46 IST
ಜೋಶಿಮಠದಲ್ಲಿ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿರುವ ಮನೆ
ಜೋಶಿಮಠದಲ್ಲಿ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿರುವ ಮನೆ    

ನವದೆಹಲಿ/ಡೆಹ್ರಾಡೂನ್‌: ಜೋಶಿಮಠದ ಭೂಕುಸಿತ ಪರಿಸ್ಥಿತಿ ಎದುರಿಸಲು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಯೋಜನೆಗಳ ಸಿದ್ಧತೆಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ತಜ್ಞರು ಉತ್ತರಾಖಂಡ ಸರ್ಕಾರಕ್ಕೆ ನೆರವಾಗುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕಾರಿಗಳು ಹೇಳಿದರು.

ಭಾನುವಾರ ಪಿಎಂಒ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ನಂತರ ಅಧಿಕಾರಿಗಳು, ಗಡಿ ನಿರ್ವಹಣಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು (ಎನ್‌ಡಿಎಂಎ) ಸೋಮವಾರ ಉತ್ತರಾಖಂಡಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿರ್ಣಯಿಸಲಿದ್ದಾರೆ ಎಂದರು.

ಸುಮಾರು 600 ಸಂತ್ರಸ್ತ ಕುಟುಂಬಗಳ ತಕ್ಷಣ ಸ್ಥಳಾಂತರಕ್ಕೆ ನಿರ್ದೇಶಿಸಿದ ಒಂದು ದಿನದ ನಂತರ ಪರಿಸ್ಥಿತಿ ನಿರ್ಣಯಿಸಲು ಈ ಸಭೆ ನಡೆಯಿತು.

ADVERTISEMENT

ಎನ್‌ಡಿಎಂಎ, ವಿಪತ್ತು ನಿರ್ವಹಣಾ ರಾಷ್ಟ್ರೀಯ ಸಂಸ್ಥೆ, ಭಾರತೀಯ ಭೂಸರ್ವೇಕ್ಷಣಾ ಇಲಾಖೆ, ಐಐಟಿ ರೂರ್ಕೀ, ವಾಡಿಯಾ ಇನ್ಸ್‌ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರೋಲಜಿ ಆಂಡ್‌ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ತಜ್ಞರನ್ನು ಒಳಗೊಂಡ ತಂಡ ಪರಿಸ್ಥಿತಿ ಅಧ್ಯಯನ ನಡೆಸಿ, ಸೂಕ್ತ ಶಿಫಾರಸು ಮಾಡಲಿದೆ ಎಂದು ತಿಳಿಸಿದರು.

ಜೋಶಿಮಠದ ವಸತಿ ಸ್ಥಳದಲ್ಲಿ ಭೂಕುಸಿತ ಮತ್ತು ಬಿರುಕು ಕಾಣಿಸಿಕೊಂಡಿದ್ದು, ಈಗಾಗಲೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಒಂದು ತಂಡ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ ನಾಲ್ಕು ತಂಡಗಳು ಸ್ಥಳ ತಲುಪಿವೆ. ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಿಎಂಒ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ನಡೆಸಿದ ಪರಿಶೀಲನಾ ಸಭೆಯಲ್ಲಿ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಪರಿಸ್ಥಿತಿ ವಿವರಿಸಿದರು. ಕೇಂದ್ರ ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಸಭೆಯಲ್ಲಿದ್ದರು. ಜೋಶಿಮಠದ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ವರ್ಚುವಲ್‌ ಮೂಲಕ ಪಾಲ್ಗೊಂಡರು.

ಜೋಶಿಮಠ ಭೂಕುಸಿತ ವಲಯ ಘೋಷಣೆ

ಜೋಶಿಮಠವನ್ನು ಭೂಕುಸಿತ ವಲಯವೆಂದು ಘೋಷಿಸಲಾಗಿದೆ. ಭೂಕುಸಿತದ ಈ ಪಟ್ಟಣದಲ್ಲಿ ವಾಸಯೋಗ್ಯವಲ್ಲದ ಮನೆಗಳಲ್ಲಿದ್ದ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗಡವಾಲಿ ಆಯುಕ್ತ ಸುಶಿಲ್ ಕುಮಾರ್‌ ಭಾನುವಾರ ತಿಳಿಸಿದರು.

ಕನಿಷ್ಠ 90 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸಬೇಕಾಗಿದೆ. ಸ್ಥಳೀಯ ಆಡಳಿತವು ಪಟ್ಟಣದ ನಾಲ್ಕೈದು ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು.

‘ನಿಧಾನವಾಗಿ ಭೂಕುಸಿತವಾಗುತ್ತಿದೆ. ಆದರೆ, ಕಳೆದ ವಾರ ಮನೆಗಳು, ಜಮೀನು ಮತ್ತು ರಸ್ತೆಗಳಲ್ಲಿ ಭಾರಿ ಬಿರುಕುಗಳು ಕಾಣಿಸಿವೆ. ನೀರಿನ ಕಾಲುವೆ ಒಡೆದುಹೋದ ನಂತರ ಪರಿಸ್ಥಿತಿ ಹದಗೆಟ್ಟಿದೆ’ ಎಂದು ಅವರು ಹೇಳಿದರು.

ಸಮಿತಿ ಸಲ್ಲಿಕೆಗೆ ಅರ್ಜಿ ಸಲ್ಲಿಕೆ

ಜೋಶಿಮಠದ ಸಂತ್ರಸ್ತರ ಪುನರ್ವಸತಿಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತಾಧಿಕಾರ ಜಂಟಿ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ರೋಹಿತ್‌ ದಾಂಡ್ರೀಯಲ್ ಅವರು ಹೈಕೋರ್ಟ್‌ನಲ್ಲಿ ಭಾನುವಾರ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.