ADVERTISEMENT

ಮಣಿಪುರ: ಪತ್ರಕರ್ತ, ಸಾಮಾಜಿಕ ಕಾರ್ಯಕರ್ತನ ವಿರುದ್ಧ ಎನ್‌ಎಸ್‌ಎ ಪ್ರಕರಣ ದಾಖಲು

ಕೋವಿಡ್‌ನಿಂದ ಸಾವಿಗೀಡಾದ ಬಿಜೆಪಿ ನಾಯಕನಿಗೆ ಕುರಿತು ಎಫ್‌ಬಿ ಪೋಸ್ಟ್

ಪಿಟಿಐ
Published 18 ಮೇ 2021, 14:28 IST
Last Updated 18 ಮೇ 2021, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ (ಮಣಿಪುರ): ಕೋವಿಡ್‌–19ನಿಂದಾಗಿ ಕಳೆದ ವಾರ ಸಾವಿಗೀಡಾದ ಮಣಿಪುರ ರಾಜ್ಯ ಬಿಜೆಪಿ ಮುಖ್ಯಸ್ಥ ಎಸ್. ಟೀಕೇಂದ್ರ ಸಿಂಗ್ ಅವರಿಗೆ ಸಂತಾಪ ಸೂಚಿಸಿ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಖೇಮ್ ಹಾಗೂ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೈಚೊಂಬಮ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ (ಎನ್ಎಸ್‌ಎ) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಿಶೋರ್ ಚಂದ್ರ ಹಾಗೂ ಎರೆಂಡ್ರೊ ಅವರು ತಮ್ಮ ಫೇಸ್‌ಬುಕ್ ಖಾತೆಗಳಲ್ಲಿ ಟೀಕೇಂದ್ರ ಸಿಂಗ್ ಅವರಿಗೆ ಸಂತಾಪ ಸೂಚಿಸಿದ್ದರು. ನಂತರ ಇಬ್ಬರೂ ಪ್ರತ್ಯೇಕವಾಗಿ ತಮ್ಮ ಪೋಸ್ಟ್‌ಗಳಲ್ಲಿ ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ಕೋವಿಡ್‌–19 ಸಾಂಕ್ರಾಮಿಕ ವಾಸಿಯಾಗುವುದಿಲ್ಲ ಎಂದು ಬರೆದಿದ್ದರು. ಗುರುವಾರ ಇಬ್ಬರನ್ನೂ ಪೊಲೀಸರು ಬಂಧಿಸಿ ಎನ್ಎಸ್‌ಎ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಣಿಪುರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಉಷಂ ದೇಬನ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ. ಪ್ರೇಮಾನಂದ ಮೀಟೈ ಪತ್ರಕರ್ತ ಕಿಶೋರ್‌ಚಂದ್ರ ಹಾಗೂ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಅವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಇಬ್ಬರ ಮನೆಗಳಿಗೆ ತೆರಳಿದ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ADVERTISEMENT

ಸೋಮವಾರ ಇಬ್ಬರಿಗೂ ಜಾಮೀನು ಮಂಜೂರಾಗಿದೆ. ಆದರೆ, ಸರ್ಕಾರವು ಅವರಿಬ್ಬರ ವಿರುದ್ಧ ಎನ್ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದೆ.

‘ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಇವರಿಬ್ಬರೂ ರಾಜ್ಯದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ಪುನರಾರಂಭಿಸಬಹುದು’ ಎಂದು ಇಂಫಾಲದ ಪಶ್ಚಿಮ ವಿಭಾಗದ ಮ್ಯಾಜಿಸ್ಟ್ರೇಟ್ ಟಿ.ಎಚ್. ಕಿರಣ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕಿಶೋರ್ ಚಂದ್ರ ಅವರು ‘ಫ್ರಂಟ್‌ಲೈನ್ ಮಣಿಪುರ’ ನ್ಯೂಸ್ ಪೋರ್ಟಲ್‌ನಲ್ಲಿ ಬಿಜೆಪಿಯನ್ನು ಟೀಕಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು. ಎರೆಂಡ್ರೊ ಅವರು ಪೀಪಲ್ಸ್ ರೀಸರ್ಜೆನ್ಸ್ ಅಂಡ್ ಜ್ಯಸ್ಟಿಸ್ ಅಲೆಯನ್ಸ್ (ಪಿಆರ್‌ಜೆಎ) ರಾಜಕೀಯ ಸಂಘಟನೆಯ ಸಮನ್ವಯಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.