ಸುಪ್ರೀಂ ಕೋರ್ಟ್
ನವದೆಹಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪತ್ರಕರ್ತೆಯ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಮುಖ ಸುದ್ದಿ ವಾಹಿನಿಯೊಂದರಲ್ಲಿ ಪತ್ರಕರ್ತೆಯಾಗಿದ್ದ ಸೌಮ್ಯಾ ಅವರನ್ನು 2008ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಕರಣದಲ್ಲಿ, ರವಿ ಕಪೂರ್, ಅಮಿತ್ ಶುಕ್ಲ, ಬಲ್ಜೀತ್ ಸಿಂಗ್ ಮಲಿಕ್ ಮತ್ತು ಅಜಯ್ ಕುಮಾರ್ ಎಂಬುವವರ ದೋಷ ಸಾಬೀತಾಗಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಫೆಬ್ರುವರಿ 12ರಂದು ದೆಹಲಿ ಹೈಕೋರ್ಟ್ ನಾಲ್ವರಿಗೂ ಜಾಮೀನು ನೀಡಿದೆ.
ಸೌಮ್ಯಾ ಅವರ ತಾಯಿ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿರುವ ನ್ಯಾಯಪೀಠವು ನಡೆಸುವ ಸಾಧ್ಯತೆಯಿದೆ.
ಶಿಕ್ಷೆ ವಜಾಗೊಳಿಸುವಂತೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಪರಾಧಿಗಳು 14 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡಿತ್ತು. ಬಿಡುಗಡೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ಪೊಲೀಸರಿಗೆ ಜನವರಿ 23ರಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.