ADVERTISEMENT

ರಾಜೀವ್‌ ಪ್ರತಿಷ್ಠಾನಕ್ಕೆ ಪರಿಹಾರ ನಿಧಿಯ ಹಣ: ಬಿಜೆಪಿ ಆರೋಪ

ಇದೊಂದು ಲಜ್ಜೆಗೆಟ್ಟ ವಂಚನೆ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕೆ

ಪಿಟಿಐ
Published 26 ಜೂನ್ 2020, 12:00 IST
Last Updated 26 ಜೂನ್ 2020, 12:00 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ನವದೆಹಲಿ: ‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಹಣ ನೀಡಲಾಗಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

‘ಇದೊಂದು ಲಜ್ಜೆಗಟ್ಟ ವಂಚನೆ. ದೇಶದ ಜನರಿಗೆ ಬಹುದೊಡ್ಡ ನಂಬಿಕೆ ದ್ರೋಹ ಮಾಡಲಾಗಿದೆ’ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

‘ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ನೆರವು ನೀಡಲು ಪಿಎಂಎನ್‌ಆರ್‌ಎಫ್ ಹಣ ಬಳಸಲಾಗುತ್ತಿದೆ. ಆದರೆ, ಯುಪಿಎ ಅವಧಿಯಲ್ಲಿ ರಾಜೀವ ಗಾಂಧಿ ಪ್ರತಿಷ್ಠಾನಕ್ಕೆ ಹಣ ನೀಡಿದ್ದು ಏಕೆ? ಪಿಎಂಎನ್‌ಆರ್‌ಎಫ್‌ ಮಂಡಳಿ, ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಒಟ್ಟಾರೆ ಇದೊಂದು ಖಂಡನೀಯ ವಿಷಯ. ನೀತಿ ಸಂಹಿತೆಗಳನ್ನು ಗಾಳಿಗೆ ತೂರಲಾಗಿದೆ. ಪಾರದರ್ಶಕತೆಯನ್ನೇ ಕಾಪಾಡಿಲ್ಲ’ ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

’ಜನರು ಶ್ರಮವಹಿಸಿ ದುಡಿದ ಹಣವನ್ನು ಒಂದು ಕುಟುಂಬದ ಪ್ರತಿಷ್ಠಾನಕ್ಕೆ ಬಳಸಿರುವುದು ವಂಚನೆ. ಆಸ್ತಿ, ಹಣಕ್ಕಾಗಿ ದುರಾಸೆ ಪಟ್ಟಿರುವ ಒಂದು ಕುಟುಂಬ ರಾಷ್ಟ್ರಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಸ್ವಯಂ ಲಾಭಕ್ಕಾಗಿ ಲೂಟಿ ಮಾಡಿರುವುದಕ್ಕೆ ಕಾಂಗ್ರೆಸ್‌ನ ವಂಶಸ್ಥರು ಕ್ಷಮೆಯಾಚಿಸಬೇಕಾಗಿದೆ’ ಎಂದು ಒತ್ತಾಯಿಸಿದ್ದಾರೆ.

ತಮ್ಮ ಆರೋಪಗಳಿಗೆ ಸಾಕ್ಷ್ಯವಾಗಿ ದಾಖಲೆಗಳ ಚಿತ್ರಗಳನ್ನು ಸಹ ಅವರು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದೇ ವಿಷಯದ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸೋನಿಯಾ ಗಾಂಧಿ ಅವರು ರಾಣಿ ಅಲ್ಲ. ಆರೋಪಗಳ ಬಗ್ಗೆ ವಿವರಣೆ ನೀಡಬೇಕು. ದೇಶದಲ್ಲಿನ ಭ್ರಷ್ಟಾಚಾರದ ಸಾಹಿತ್ಯವನ್ನು ಅವರೇ ಬರೆದಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಭ್ರಷ್ಟಾಚಾರ ಮತ್ತು ಕುತಂತ್ರಗಳಿಗೆ ಕಾಂಗ್ರೆಸ್‌ ಕುಖ್ಯಾತಿಯಾಗಿದೆ. ಶ್ರೀಮಂತರಾಗಲು ರಾಜೀವ್‌ ಗಾಂಧಿ ಪ್ರತಿಷ್ಠಾನದ ರೀತಿಯ ನಕಲಿ ಕಂಪನಿಗಳನ್ನು ಸೋನಿಯಾ ಗಾಂಧಿ ಕುಟುಂಬ ಸೃಷ್ಟಿಸಿದೆ’ ಎಂದು ಆರೋಪಿಸಿದ್ದಾರೆ.

‘ಪಿಎಂಎನ್‌ಆರ್‌ಎಫ್‌ನ ಲೆಕ್ಕಪತ್ರ ಪರಿಶೀಲನೆ ನಡೆಸಿದ ಆಡಿಟ್‌ ಕಂಪನಿಯ ಮುಖ್ಯಸ್ಥರು ಕಾಂಗ್ರೆಸ್‌ನ ಮಾಜಿ ಸಂಸದರಾಗಿದ್ದರು ಮತ್ತು ಕೇಂದ್ರದಲ್ಲಿಯೂ ಸಚಿವರಾಗಿದ್ದರು. ಯುಪಿಎ ಅಧಿಕಾರಾವಧಿಯಲ್ಲಿ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಪಿಎಂಎನ್‌ಆರ್‌ಎಫ್‌ನಿಂದ ಮೂರು ಬಾರಿ ದೇಣಿಗೆ ನೀಡಲಾಗಿತ್ತು’ ಎಂದು ದೂರಿದ್ದಾರೆ.

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ, ‘ಭಾರತ–ಚೀನಾ ಗಡಿ ವಿಷಯ ಗಂಭೀರ ಸ್ವರೂಪ ಪಡೆದಿರುವಾಗ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಇಂತಹ ಆರೋಪಗಳನ್ನು ಮಾಡುತ್ತಿದೆ. ಬಿಜೆಪಿ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದೆ’ ಎಂದು ದೂರಿದ್ದಾರೆ.

‘ಚೀನಾ ವಿರುದ್ಧ ಹೋರಾಟ ಮಾಡುವುದನ್ನು ಕೈಬಿಟ್ಟು ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಹೋರಾಟ ನಡೆಸುತ್ತಿದ್ದಾರೆ. ಮೊದಲು ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಸರ್ಕಾರ ಆದ್ಯತೆ ನೀಡಲಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.