ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಬಿಹಾರ ಚುನಾವಣೆ ಇಂದು ಬಿಜೆಪಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 19:31 IST
Last Updated 10 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯವನ್ನು ಬಿಜೆಪಿಯು ಭಾನುವಾರ ಆರಂಭಿಸಲಿದೆ. ‘ಗಯಾ’ದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಭಾನುವಾರ ಬಿಜೆಪಿಯ ಮೊದಲ ಸಾರ್ವಜನಿಕ ರ್‍ಯಾಲಿ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಪಟ್ನಾದ ಹನುಮಾನ್‌ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಡ್ಡಾ ಅವರು ಬಿಹಾರದಲ್ಲಿ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ. ಬಳಿಕ ಅವರು, ಜಯಪ್ರಕಾಶ್‌ ನಾರಾಯಣ ಅವರ ಸ್ಮಾರಕದ ಬಳಿ ತೆರಳಿ, ಅಲ್ಲಿ ಜೆಪಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಪಟ್ನಾ ವಿಮಾನ ನಿಲ್ದಾಣದಲ್ಲೇ ನಡ್ಡಾ ಅವರಿಗೆ ಭವ್ಯ ಸ್ವಾಗತ ಕೋರಲು ಪಕ್ಷದ ರಾಜ್ಯ ಘಟಕವು ಸಿದ್ಧತೆ ಮಾಡಿಕೊಂಡಿದೆ.

ಬಿಜೆಪಿಯು ಬಿಹಾರದಲ್ಲಿ ಜೆಡಿಯು ಜತೆ ಸೀಟು ಹಂಚಿಕೆ ಮಾಡಿಕೊಂಡಿದೆ. ಇದರಿಂದಾಗಿ ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಲ್‌ಜೆಪಿಯು ರಾಜ್ಯದಲ್ಲಿ ಮೈತ್ರಿಯಿಂದ ಹೊರನಡೆದಿದ್ದಲ್ಲದೆ, ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಇದರಿಂದಾಗಿ ಬಿಜೆಪಿ– ಜೆಡಿಯು ಮೈತ್ರಿಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಗಯಾದ ಸಭೆಯ ನಂತರ ಮರಳಿ ಪಟ್ನಾಗೆ ಬರುವ ನಡ್ಡಾ ಈ ವಿಚಾರವಾಗಿ ಮುಖಂಡರ ಜತೆ ಚರ್ಚಿಸಲಿದ್ದಾರೆ.

ADVERTISEMENT

ಬಿಜೆಪಿ ಸಭೆ: ಬಿಹಾರ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿಯು ದೆಹಲಿಯಲ್ಲಿ ಶನಿವಾರ ಸಭೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.