ADVERTISEMENT

ನ್ಯಾಯಮೂರ್ತಿಗಳು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರಬೇಕು: ಸುಪ್ರೀಂ ಕೋರ್ಟ್‌

ಗೌರಿ ಪ್ರಮಾಣ ವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ: ಇನ್ನಷ್ಟು ವಿವರಣೆ ನೀಡಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 19:31 IST
Last Updated 10 ಫೆಬ್ರುವರಿ 2023, 19:31 IST
   

ನವದೆಹಲಿ: ‘ಧರ್ಮ, ಭಾಷೆ, ಪ್ರದೇಶ ಅಥವಾ ಇತರ ಯಾವುದೇ ಮಿತಿಯನ್ನು ಮೀರಿ ದೇಶದ ಸಹೋದರತೆಯನ್ನು ಕಾಪಾಡುವ, ಸೌಹಾರ್ದವನ್ನು ಉತ್ತೇಜಿಸುವ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಅದರಲ್ಲೂ ನ್ಯಾಯಮೂರ್ತಿಗಳಿಗೆ ಈ ಸಂಬಂಧ ಹೆಚ್ಚಿನ ಜವಾಬ್ದಾರಿ ಇರುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತಡೆ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಫೆ.7ರಂದು ವಜಾ ಮಾಡಿತ್ತು. ಈ ಅರ್ಜಿಯನ್ನು ವಜಾ ಮಾಡಿರುವುದಕ್ಕೆ ಇನ್ನಷ್ಟು ಕಾರಣಗಳನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಬಿ.ಆರ್‌. ಗವಾಯಿ ಅವರಿದ್ದ ಪೀಠವು ನೀಡಿದೆ.

‘ನ್ಯಾಯಮೂರ್ತಿಯೊಬ್ಬರನ್ನು ಕಾಯಂಗೊಳಿಸುವ ವೇಳೆ, ಅವರ ನಡತೆ ಹಾಗೂ ಅವರು ನೀಡಿದ ತೀರ್ಪುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನ್ಯಾಯಾಲಯವು ಎಲ್ಲರ ಸಮ್ಮುಖದಲ್ಲಿ ನಡೆಯುತ್ತದೆ. ನ್ಯಾಯಮೂರ್ತಿಗಳು ನೀಡುವ ತೀರ್ಪಿಗೆ ಕಾರಣವಾದ ಅಂಶಗಳನ್ನು ಎಲ್ಲರ ಮುಂದೆಯೇ ಹೇಳುತ್ತಾರೆ. ವಕೀಲರು, ಸಾರ್ವಜನಿಕರು ಹಾಗೂ ಕಕ್ಷಿದಾರರು ನ್ಯಾಯಮೂರ್ತಿಗಳನ್ನು ಪ್ರತಿ ದಿನವೂ ಮೌಲ್ಯಮಾಪನ ಮಾಡುತ್ತಿರುತ್ತಾರೆ’ ಎಂದರು.

ADVERTISEMENT

‘ನ್ಯಾಯಮೂರ್ತಿಗಳ ನಡತೆ ಮತ್ತು ಅವರು ನೀಡುವ ತೀರ್ಪುಗಳು ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಯಾಕೆಂದರೆ, ಪ್ರಜಾಪ್ರಭುತ್ವವನ್ನು ಶಕ್ತಿಯುತಗೊಳಿಸುವ, ಮಾನವ ಹಕ್ಕುಗಳನ್ನು, ಕಾನೂನುಗಳನ್ನು ರಕ್ಷಿಸುವ ಹೊಣೆ ನ್ಯಾಯಾಂಗದ ಮೇಲಿದೆ’ ಎಂದರು.

**

ಕೊಲಿಜಿಯಂ ನಿರ್ಧಾರದ ಕುರಿತು ನ್ಯಾಯಾಂಗೀಯ ಪರಾಮರ್ಶೆ ನಡೆಸುವುದು, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲಂಘಿಸಿದಂತೆ. ನ್ಯಾಯಮೂರ್ತಿ ಹುದ್ದೆಗೆ ವ್ಯಕ್ತಿಯೊಬ್ಬರು ಸೂಕ್ತವೋ ಇಲ್ಲವೋ ಎಂದು ಹೇಳುವುದು ಕೊಲಿಜಿಯಂ ನಿರ್ಧಾರವನ್ನು ಮೌಲ್ಯಮಾಪನ ಮಾಡಿದಂತೆ.
–ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.