ADVERTISEMENT

ಆರ್‌.ಜಿ ಕರ್‌ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ತೀರ್ಪು ಇಂದು

ಪಿಟಿಐ
Published 17 ಜನವರಿ 2025, 23:30 IST
Last Updated 17 ಜನವರಿ 2025, 23:30 IST
   

ಕೋಲ್ಕತ್ತ: ನಗರದ ಆರ್‌.ಜಿ. ಕರ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣದ ಬಹು ನಿರೀಕ್ಷಿತ ತೀರ್ಪು ಶನಿವಾರ ಪ್ರಕಟವಾಗಲಿದೆ.

ಕಳೆದ ವರ್ಷ ಆಗಸ್ಟ್‌ 9ರಂದು ನಡೆದಿದ್ದ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶ ಮತ್ತು ಸುದೀರ್ಘ ಪ್ರತಿಭಟನೆಗೆ ಕಾರಣವಾಗಿತ್ತು. ಸ್ಥಳೀಯ ಪೊಲೀಸರಿಗೆ ಸ್ವಯಂ ಸೇವಕನಂತೆ ಕೆಲಸ ಮಾಡುತ್ತಿದ್ದ ಸಂಜಯ್‌ ರಾಯ್ ಎಂಬಾತ ಈ ಪ್ರಕರಣದ ಮುಖ್ಯ ಆರೋಪಿ.

ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್‌ ದಾಸ್‌ ಅವರು ಪ್ರಕರಣದ ವಿಚಾರಣೆ ಆರಂಭಿಸಿದ 57 ದಿನಗಳ ಬಳಿಕ ತೀರ್ಪು ಹೊರ ಬೀಳಲಿದೆ.

ADVERTISEMENT

ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಪೊಲೀಸರು ಆಗಸ್ಟ್‌ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಬಂಧನ ನಡೆದಿತ್ತು.

ಕಲ್ಕತ್ತಾ ಹೈಕೋರ್ಟ್‌ ನಂತರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದಿಸಿದೆ.

ಪ್ರಕರಣದ ವಿಚಾರಣೆಯು ನವೆಂಬರ್‌ 12ರಂದು ಆರಂಭವಾಗಿತ್ತಲ್ಲದೆ, ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜನವರಿ 9ರಂದು ಕೊನೆಗೊಂಡಿತ್ತು.

ವೈದ್ಯ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ದೀರ್ಘಕಾಲದ ಪ್ರತಿಭಟನೆಗೆ ಕಾರಣವಾಗಿತ್ತು. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಮತ್ತು ಸುರಕ್ಷತೆ ಹೆಚ್ಚಿಸುವಂತೆ ಆಗ್ರಹಿಸಿ ದೇಶದ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ– ಪ್ರತ್ಯಾರೋಪಕ್ಕೂ ಈ ಘಟನೆ ಕಾರಣವಾಗಿತ್ತು.

‘ವಿಚಾರಣೆ ಅರ್ಧ ಮಾತ್ರ ಮುಗಿದಿದೆ’

‘ಈ ಪ್ರಕರಣದ ವಿಚಾರಣೆ ಅರ್ಧದಷ್ಟು ಮಾತ್ರ ಮುಗಿದಿದೆ. ಎಲ್ಲ ಆರೋಪಿಗಳನ್ನೂ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಸಂತ್ರಸ್ತೆಯ ಪೋಷಕರು ಒತ್ತಾಯಿಸಿದ್ದಾರೆ. ತೀರ್ಪು ಪ್ರಕಟಿಸುವ ಮುನ್ನಾದಿನ ಸುದ್ದಿಸಂಸ್ಥೆಯ ಜತೆ ಮಾತನಾಡಿದ ಸಂತ್ರಸ್ತೆಯ ತಾಯಿ ‘ಸಂಜಯ್ ರಾಯ್‌ ತಪ್ಪಿತಸ್ಥನಾಗಿದ್ದು ಶನಿವಾರದ ತೀರ್ಪು ಅವನ ವಿರುದ್ಧವಾಗಿರುತ್ತದೆ. ಆದರೆ ಇನ್ನೂ ಬಂಧನಕ್ಕೆ ಒಳಗಾಗದ ಇತರ ಆರೋಪಿಗಳ ವಿಚಾರ ಏನಾಯಿತು? ಅವರು ಮುಕ್ತವಾಗಿ ತಿರುಗಾಡುವುದನ್ನು ಮತ್ತು ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ಅಡ್ಡಾಡುವುದನ್ನು ನಾನು ನೋಡಿದ್ದೇನೆ. ಹಾಗಾಗಿ ವಿಚಾರಣೆಯು ಅರ್ಧ ಮಾತ್ರ ಮುಗಿದಿದೆ’ ಎಂದಿದ್ದಾರೆ.  ‘ಈ ಕೃತ್ಯದ ಹಿಂದೆ ಸಂಜಯ್ ಒಬ್ಬನೇ ಇದ್ದಾನೆ ಎಂದು ನನಗನಿಸುವುದಿಲ್ಲ. ಇನ್ನೂ ಹಲವರು ಭಾಗಿಯಾಗಿದ್ದು ಅವರೆಲ್ಲರೂ ಮುಕ್ತವಾಗಿ ಓಡಾಡುತ್ತಿದ್ದಾರೆ. ಅವರನ್ನೂ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂಬ ಆಶಾವಾದ ಹೊಂದಿದ್ದೇವೆ. ಆ ಬಳಿಕವಷ್ಟೇ ನಮಗೆ ನ್ಯಾಯ ಲಭಿಸಿದಂತಾಗಲಿದೆ’ ಎಂದು ಸಂತ್ರಸ್ತೆಯ ತಂದೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.