ಸಾಂದರ್ಭಿಕ ಚಿತ್ರ
ಮಥುರಾ(ಉತ್ತರ ಪ್ರದೇಶ): ನ್ಯಾಯಾಧೀಶೆಯ ಮಂಗಳೂಸೂತ್ರವನ್ನು ಕದ್ದಿದ್ದ 10 ಮಂದಿ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳಿಯರು ಮಥುರಾದ ದೇವಾಲಯಗಳಲ್ಲಿ ಮಹಿಳಾ ಭಕ್ತರನ್ನೇ ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿದ್ದರು ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಉಜ್ಜೈನ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾ ಸಾಹು ಜೂನ್ 1ರಂದು ವೃಂದಾವನದ ಠಾಕೂರ್ ಶ್ರೀ ರಾಧಾ ರಾಮನ್ ದೇವಾಯಕ್ಕೆ ಕುಟುಂಬದ ಜೊತೆ ಆಗಮಿಸಿದ್ದಾಗ ಅವರ ಬಂಗಾರದ ಮಂಗಳಸೂತ್ರವನ್ನು ಕದಿಯಲಾಗಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ದೇವಾಲಯಗಳಲ್ಲಿ ಸಕ್ರಿಯವಾಗಿರುವ ಮಹಿಳಾ ಕಳ್ಳರು ಮತ್ತು ಜೇಬುಗಳ್ಳರನ್ನು ಗುರುತಿಸಿ ಬಂಧಿಸಲು ನಾವು ಕಾರ್ಯಾಚರಣೆ ಆರಂಭಿಸಿದ್ದೇವೆ. ಆ ಬಳಿಕ, ಶನಿವಾರ 10 ಮಂದಿ ಕಳ್ಳಿಯರನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಕದ್ದ ಹಲವು ಪರ್ಸ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಅದರಲ್ಲಿ ನಗದು, ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಚಾಲನಾ ಪರವಾನಗಿಗಳು ಮತ್ತು ಇತರ ಪ್ರಮುಖ ದಾಖಲೆಗಳು,
ಒಟ್ಟು ₹18,652 ನಗದು ಸಿಕ್ಕಿದೆ.
ವಿಚಾರಣೆಯ ಸಮಯದಲ್ಲಿ, ಈ ಮಹಿಳೆಯರು ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಆಗಮಿಸಿದ್ದು, ಇಲ್ಲಿನ ಕಳ್ಳರ ಗ್ಯಾಂಗ್ ಸೇರಿದ್ದಾರೆ ಎಂಬುದು ತಿಳಿದುಬಂದಿದೆ.
ವೃಂದಾವನ ಮತ್ತು ಮಥುರಾದ ಜನದಟ್ಟಣೆಯ ದೇವಾಲಯಗಳಲ್ಲಿ ಜೇಬುಗಳ್ಳತನ, ಫೋನ್ ಕಳ್ಳತನ ಮತ್ತು ಆಭರಣಗಳನ್ನು ಕದಿಯುವಲ್ಲಿ ಅವರು ತೊಡಗಿದ್ದರು.
ಕಾನೂನು ಪ್ರಕ್ರಿಯೆ ಆರಂಭವಾಗಿದ್ದು, ಬಂಧಿತರನ್ನು ಜೈಲಿಗೆ ಅಟ್ಟಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.