ADVERTISEMENT

ರೈಲು: ಸೀಟು ಕಾಯ್ದಿರಿಸಿದ 2ನೇ ಪಟ್ಟಿ ಕೈಬಿಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:16 IST
Last Updated 5 ಡಿಸೆಂಬರ್ 2021, 14:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ರೈಲು ನಿರ್ಗಮಿಸುವ ಮುನ್ನ 30 ಮತ್ತು 5 ನಿಮಿಷದ ನಡುವೆ ಸಿದ್ಧಪಡಿಸುವ ಸೀಟು ಕಾಯ್ದಿರಿಸಿದ ವಿವರಗಳ ಎರಡನೇ ಪಟ್ಟಿಯನ್ನು ಕೈಬಿಡಬೇಕು’ ಎಂದು ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೆ ಇಲಾಖೆಗೆ ಸಲಹೆ ಮಾಡಿದೆ.

ಸೀಟು ರದ್ಧತಿ ಆಧರಿಸಿ ಕಾಯ್ದಿರಿಸುವಿಕೆ (ಆರ್‌ಎಸಿ) ಮತ್ತು ನಿರೀಕ್ಷಣಾ ಪಟ್ಟಿಯಲ್ಲಿ ಸಾವಿರಾರು ಪ್ರಯಾಣಿಕರು ಇರುವಾಗ, 30–5 ನಿಮಿಷದ ಅವಧಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಯಾವುದೇ ತರ್ಕ ಇಲ್ಲ ಎಂದು ಸಮಿತಿ ಹೇಳಿದೆ. ಈ ಅವಧಿಯಲ್ಲಿ ಟಿಕೆಟ್‌ ಬುಕ್ಕಿಂಗ್ ಮಾಡಿದರೂ ಸೀಟು ಲಭ್ಯತೆ ಖಾತರಿಯಾಗುವ ಸಂಭವವೂ ಇರುವುದಿಲ್ಲ ಎಂದು ಪ್ರತಿಪಾದಿಸಿದೆ.

‘ಭಾರತೀಯ ರೈಲ್ವೆಯಲ್ಲಿ ಟಿಕೆಟ್‌ ಕಾಯ್ದಿರಿಸಿರುವ ವ್ಯವಸ್ಥೆ’ ಕುರಿತ ವರದಿಯಲ್ಲಿ ಸಮಿತಿಯು, ಅಲ್ಪಾವಧಿಯಲ್ಲಿ ಪ್ರಯಾಣ ಕಾರ್ಯಕ್ರಮ ನಿರ್ಧರಿಸುವವರಿಗೆ ಸದ್ಯಕ್ಕೆ ತತ್ಕಾಲ್‌ ಸೌಲಭ್ಯವಿದೆ. ರೈಲು ನಿರ್ಗಮನದ 4–5 ಗಂಟೆ ಮೊದಲು ಟಿಕೆಟ್‌ ಕಾಯ್ದಿರಿಸುವಿಕೆ ಕುರಿತಂತೆ ಮೊದಲ ಪಟ್ಟಿ ಸಿದ್ಧವಾದ ಬಳಿಕ ಖಾಲಿ ಉಳಿಯುವ ಎಲ್ಲ ಸೀಟುಗಳನ್ನು ಸ್ವಯಂಚಾಲಿಯವಾಗಿ ಆರ್‌ಎಸಿ/ನಿರೀಕ್ಷಣಾ ಪಟ್ಟಿಯಲ್ಲಿ ಇರುವ ಪ್ರಯಾಣಿಕರಿಗೆ ಹಂಚಿಕೆ ಮಾಡಬೇಕು’ ಎಂದೂ ಸಮಿತಿಯು ಸಲಹೆ ಮಾಡಿದೆ.

ADVERTISEMENT

ಬಿಜೆಪಿ ಸಂಸದ ರಾಧಮೋಹನ್ ಸಿಂಗ್‌ ನೇತೃತ್ವದ ಸಮಿತಿಯು, ರಾಜಧಾನಿ, ಶತಾಬ್ಧಿ ಮತ್ತು ಡುರೊಂಟೊ ರೈಲುಗಳಿಗೆ ಅನ್ವಯಿಸಿ ನಿಗದಿಪಡಿಸಿದ ಪ್ರಯಾಣ ದರ ಎಲ್ಲರಿಗೂ ಕೈಗೆಟುಕುವಂತೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ತಿಳಿಸಿದೆ.

ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣದರಕ್ಕೆ ಹೋಲಿಸಿದರೆ ಈ ರೈಲುಗಳ ದರ ದುಬಾರಿ. ‘ಫ್ಲೆಕ್ಸಿ ಫೇರ್’ ಹೆಸರಿನಲ್ಲಿ ಇನ್ನಷ್ಟು ದರ ಏರಿಸಿದರೆ ನಿರ್ದಿಷ್ಟ, ಸೀಮಿತ ಆದಾಯವುಳ್ಳ ಕುಟುಂಬಗಳಿಗೆ ಇದು ಎಟುಕದೇ ಹೋಗಬಹುದು ಎಂದು ಹೇಳಿದೆ.

ಬಳಕೆದಾರರ ದಟ್ಟಣೆ ನಿಭಾಯಿಸುವಂತೆ ಆಗಾಗ್ಗೆ ಐಆರ್‌ಸಿಟಿಸಿ ವೆಬ್‌ಸೈಟ್‌ ಅನ್ನು ಪರಿಷ್ಕರಿಸಬೇಕು. ಪ್ರಯಾಣಿಕರಿಗೆ ತಮ್ಮ ಸೀಟು, ಬೋಗಿ ಕುರಿತು ಮಾಹಿತಿ ಸುಲಭವಾಗಿ ತಿಳಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.