ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸಲ್ಲಿ ನ್ಯಾಯ ಸಿಕ್ಕಿಲ್ಲ: ಬೃಂದಾ ಕಾರಟ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 15:30 IST
Last Updated 20 ಜನವರಿ 2025, 15:30 IST
ಬೃಂದಾ ಕಾರಟ್
ಬೃಂದಾ ಕಾರಟ್   

ನವದೆಹಲಿ: ಕೋಲ್ಕತ್ತದ ಆರ್‌.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನೀಡಿರುವ ತೀರ್ಪು ವಿಚಿತ್ರವಾಗಿದ್ದು, ತೃಪ್ತಿಕರವಾಗಿಲ್ಲ. ನ್ಯಾಯ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಸಂಜಯ್ ರಾಯ್‌ಗೆ ನೀಡಲಾಗಿರುವ ಜೀವಾವಧಿ ಶಿಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ(ಎಂ) ಪಾಲಿಟ್‌ಬ್ಯೂರೊ ಸದಸ್ಯೆ, ಈ ಅಪರಾಧದಲ್ಲಿ ಏಕ ವ್ಯಕ್ತಿ ಪಾತ್ರವಿದೆ ಎಂಬ ರಾಜ್ಯ ಸರ್ಕಾರದ ನಿಲುವನ್ನೇ ಸಿಬಿಐ ಸಹ ಹೊಂದಿದೆ ಎಂದಿದ್ದಾರೆ.

ADVERTISEMENT

'ತನಿಖೆಯೇ ದೋಷಪೂರಿತವಾಗಿರುವುದರಿಂದ ತೀರ್ಪು ಅತೃಪ್ತಿಕರವಾಗಿದೆ. ರಾಜ್ಯ ಸರ್ಕಾರವು ಮೊದಲಿನಿಂದಲೂ ಸಾಕ್ಷ್ಯ ನಾಶಕ್ಕೆ ಕಾರಣವಾದ ಅಧಿಕಾರಿಗಳನ್ನು ರಕ್ಷಿಸಿದೆ.ಆದ್ದರಿಂದ ಉತ್ತರವಿಲ್ಲದ ಹಲವು ಪ್ರಶ್ನೆಗಳಿವೆ’ಎಂದು ಕಾರಟ್ ಪಿಟಿಐಗೆ ತಿಳಿಸಿದ್ದಾರೆ.

‘ಸಿಬಿಐ, ಇದನ್ನು ಸರಿಪಡಿಸುವ ಬದಲು ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಒಬ್ಬನದ್ದೇ ಪಾತ್ರವಿದೆ ಎಂದು ಹೇಳಿದೆ. ಸರ್ಕಾರಿ ಆಸ್ಪತ್ರೆಯ ಸಾರ್ವಜನಿಕ ಪ್ರದೇಶದಲ್ಲಿ ನಡೆದ ಅಪರಾಧದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಅವರ ಕೈವಾಡವೂ ಇತ್ತೇ?. ಇವು ಉತ್ತರವಿಲ್ಲದ ಪ್ರಶ್ನೆಗಳಾಗಿವೆ. ಅಪರಾಧವನ್ನು ಮರೆಮಾಚುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇತ್ತು. ಸಿಬಿಐ ಸಹ ತನಿಖೆಯಲ್ಲಿ ಅದೇ ಮಾರ್ಗವನ್ನು ಅನುಸರಿಸಿದೆ’ಎಂದು ಅವರು ಕಿಡಿಕಾರಿದ್ದಾರೆ.

ಸದ್ಯದ ಕಾನೂನಿನಡಿ, ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣ ದಂಡನೆ ನೀಡಲಾಗುತ್ತಿದೆ. ಕೇರಳದಲ್ಲಿ ಬಾಯ್‌ಫ್ರೆಂಡ್‌ಗೆ ವಿಷವಿಕ್ಕಿ ಕೊಂದ ಮಹಿಳೆಗೆ ಮರಣ ದಂಡನೆ ವಿಧಿಸಲಾಗಿದೆ. ಆದರೆ, ಆರ್‌.ಜಿ. ಕರ್ ಪ್ರಕರಣದಲ್ಲಿ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ, ₹50,000 ದಂಡ ವಿಧಿಸಲಾಗಿದೆ ಎಂದರು.

ಕೋಲ್ಕತ್ತದ ಆರ್‌.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ಕೋಲ್ಕತ್ತ ನ್ಯಾಯಾಲಯ, ಇಂದು ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.