ADVERTISEMENT

ಪಿತೂರಿ ತನಿಖೆಗೆ ಸಮಿತಿ

ನ್ಯಾಯಾಂಗ ನಿಯಂತ್ರಿಸುವ ‘ಪ್ರಭಾವಿ’ಗಳ ಪ್ರಯತ್ನಕ್ಕೆ ಸುಪ್ರೀಂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
ರಂಜನ್‌ ಗೊಗೊಯಿ
ರಂಜನ್‌ ಗೊಗೊಯಿ   

ನವದೆಹಲಿ:ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ‘ಸುಳ್ಳು’ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂಬ ವಕೀಲ ಉತ್ಸವ್‌ ಬೈನ್ಸ್‌ ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ನೇತೃತ್ವದ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ನೇಮಿಸಿದೆ.

ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ‍ಪ್ರಕರಣದಲ್ಲಿ ಸಿಲುಕಿಸಿ ರಾಜೀನಾಮೆ ನೀಡುವಂತೆ ಮಾಡಲುಸುಪ್ರೀಂ ಕೋರ್ಟ್‌ನ ಅತೃಪ್ತ ಉದ್ಯೋಗಿಗಳು ಮತ್ತು ಇತರರು ಸೇರಿ ಪಿತೂರಿ ನಡೆಸಿದ್ದಾರೆ ಎಂದು ಬೈನ್ಸ್‌ ಅವರು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಪ್ರಮಾಣಪತ್ರ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಆರ್‌.ಎಫ್‌. ನರಿಮನ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ ಪಟ್ನಾಯಕ್‌ ಸಮಿತಿ ರಚನೆಗೆ ಸೂಚನೆ ನೀಡಿತು.

ADVERTISEMENT

ಜತೆಗೆ, ಗುಪ್ತಚರ ವಿಭಾಗ, ಸಿಬಿಐ ನಿರ್ದೇಶಕರು ಮತ್ತು ದೆಹಲಿಯ ಪೊಲೀಸ್‌ ಆಯುಕ್ತರು ಅಗತ್ಯ ಬಿದ್ದಾಗಲೆಲ್ಲ ಸಮಿತಿಗೆ ನೆರವು ನೀಡಬೇಕು ಎಂದು ನಿರ್ದೇಶಿಸಿತು.

ನ್ಯಾಯಾಂಗದ ಘನತೆಗೆ ಕುಂದು ತರಲು ವ್ಯವಸ್ಥಿತವಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿತು.

‘ಸತ್ಯ ಏನು ಎಂಬುದು ದೇಶಕ್ಕೆ ಗೊತ್ತಾಗಬೇಕು. ಹಣ ಮತ್ತು ರಾಜಕೀಯ ಬಲದ ಮೂಲಕ ಸುಪ್ರೀಂ ಕೋರ್ಟ್‌ ಅನ್ನು ನಡೆಸಲಾಗದು ಎಂಬುದನ್ನು ಜಗತ್ತಿಗೆ ತಿಳಿಸುವ ಸಮಯ ಬಂದಿದೆ. ದೇಶವನ್ನು ತಾವೇ ನಡೆಸಬಹುದು ಎಂದು ಪ್ರಭಾವಿಗಳು ಭಾವಿಸಿದ್ದಾರೆ. ವ್ಯವಸ್ಥೆಯನ್ನು ಸರಿ ಮಾಡಲು ಮುಂದಾದರೆ ಅಂಥವರನ್ನು ಕೊಲ್ಲುವ ಅಥವಾ ಅವರಿಗೆ ಮಸಿ ಹಚ್ಚುವ ಕೆಲಸ ಮಾಡಲಾಗುತ್ತಿದೆ’ ಎಂದು ಪೀಠವು ಆಕ್ರೋಶ ವ್ಯಕ್ತಪಡಿಸಿದೆ.

ತಮ್ಮ ಆರೋಪಗಳಿಗೆ ಪೂರಕವಾಗಿ ಬೈನ್ಸ್‌ ಅವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಮಿಶ್ರಾ ಕೂಡ ಆಕ್ರೋಶಗೊಂಡರು. 2018ರ ಜನವರಿಯಲ್ಲಿ ಗೊಗೊಯಿ ಅವರ ಜತೆಗೆ ಮಾಧ್ಯಮಗೋಷ್ಠಿ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಮಿಶ್ರಾ ಅವರೂ ಒಬ್ಬರು.

‘ಈ ಸಂಸ್ಥೆಯನ್ನು ಹಣಬಲದ ಮೂಲಕ ನಿಯಂತ್ರಿಸಲು ಕೆಲವರು ಬಯಸುತ್ತಿದ್ದಾರೆ. ಈ ವಿಚಾರ ಕೆಲ ಕಾಲದಿಂದ ಹರಿದಾಡುತ್ತಿದೆ. ಇವೆಲ್ಲ ಗಂಭೀರ ವಿಚಾರಗಳು. ನಾವು ಸಂಕಟಗೊಂಡಿದ್ದೇವೆ. ಕಳೆದ ಮೂರು–ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಯನ್ನು ನೋಡಿಕೊಳ್ಳುವ ರೀತಿ ಹಾಗೆಯೇ ಮುಂದುವರಿದರೆ ಈ ಸಂಸ್ಥೆ ಉಳಿಯುವುದೇ ಕಷ್ಟ’ ಎಂದು ಮಿಶ್ರಾ ಅವರು ನೋವು ತೋಡಿಕೊಂಡರು.

ಸಮಿತಿಯಿಂದ ರಮಣ ಹೊರಗೆ
ಮುಖ್ಯ ನ್ಯಾಯಮೂರ್ತಿ ಗೊಗೊಯಿ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಆಂತರಿಕ ತನಿಖೆಗೆ ರಚಿಸಲಾಗಿರುವ ಸಮಿತಿಯಿಂದ ನ್ಯಾಯಮೂರ್ತಿ ಎನ್‌.ವಿ. ರಮಣ ಹೊರಗೆ ಬಂದಿದ್ದಾರೆ.

ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಈ ಸಮಿತಿಯ ಮುಖ್ಯಸ್ಥರು. ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಬೊಬ್ಡೆ ಅವರಿಗೆ ಬುಧವಾರ ಪತ್ರೆ ಬರೆದಿದ್ದ ಸಂತ್ರಸ್ತ ಮಹಿಳೆಯು ರಮಣ ಅವರನ್ನು ಸಮಿತಿಯಲ್ಲಿ ಸೇರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಮಣ ಅವರು ಗೊಗೊಯಿ ಅವರ ಆಪ್ತ ಮಿತ್ರ. ರಮಣ ಅವರು ನಿಯಮಿತವಾಗಿ ಗೊಗೊಯಿ ಮನೆಗೆ ಭೇಟಿ ನೀಡುತ್ತಾರೆ. ಹಾಗಾಗಿ ರಮಣ ಅವರು ಸಮಿತಿಯ ಸದಸ್ಯರಾಗಿರುವುದು ಸರಿಯಲ್ಲ ಎಂದು ಪತ್ರದಲ್ಲಿ ಮಹಿಳೆ ಹೇಳಿದ್ದರು.

ಸಮಿತಿಯಲ್ಲಿ ಇಂದಿರಾ ಬ್ಯಾನರ್ಜಿ ಅವರೊಬ್ಬರೇ ಮಹಿಳೆ ಇರುವುದರ ಬಗ್ಗೆಯೂ ಸಂತ್ರಸ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಸುಪ್ರೀಂ ಕೋರ್ಟ್‌ ರೂಪಿಸಿರುವ ವಿಶಾಖಾ ಮಾರ್ಗದರ್ಶಿಸೂತ್ರಗಳಿಗೆ ಅನುಗುಣವಾಗಿ ಇಲ್ಲ. ಅದರ ಪ್ರಕಾರ, ಲೈಂಗಿಕ ದೌರ್ಜನ್ಯ ಆರೋಪದ ಆಂತರಿಕ ತನಿಖೆ ಸಮಿತಿಯಲ್ಲಿ ಮಹಿಳೆಯರೇ ಬಹುಸಂಖ್ಯಾತರಾಗಿರಬೇಕು ಎಂದೂ ಅವರು ಹೇಳಿದ್ದಾರೆ.

ತನಿಖಾ ಸಮಿತಿಯ ಮುಂದೆ ಶುಕ್ರವಾರ ಹಾಜರಾಗುವಂತೆ ಸಂತ್ರಸ್ತೆಗೆ ಸೂಚಿಸಲಾಗಿದೆ. ತಮ್ಮ ವಕೀಲರ ಜತೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಮಹಿಳೆ ಕೋರಿದ್ದಾರೆ.

ಜತೆಗೆ, ಸಮಿತಿಯ ವಿಚಾರಣೆಯ ವಿಡಿಯೊ ಚಿತ್ರೀಕರಣ ಮಾಡುವಂತೆಯೂ ಅವರು ವಿನಂತಿಸಿಕೊಂಡಿದ್ದಾರೆ. ಸೇವಾ ಜ್ಯೇಷ್ಠತೆಯಲ್ಲಿ ತಮ್ಮ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿ ಆಗಿರುವುದರಿಂದ ರಮಣ ಅವರನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಬೊಬ್ಡೆ ಅವರು ಬುಧವಾರವೇ ಹೇಳಿದ್ದರು. ಅದಲ್ಲದೆ, ಆಂತರಿಕ ತನಿಖೆಯು ನ್ಯಾಯಾಂಗ ವಿಚಾರಣಾ ಪ್ರಕ್ರಿಯೆ ಅಲ್ಲ. ಹಾಗಾಗಿ ವಕೀಲರ ಮೂಲಕ ವಾದ ಮಂಡಿಸುವ ಅವಕಾಶ ಇಲ್ಲ ಎಂದೂ ತಿಳಿಸಿದ್ದರು.

ಗಡುವು ಇಲ್ಲ
ಪಟ್ನಾಯಕ್‌ ಸಮಿತಿಗೆ ವರದಿ ಸಲ್ಲಿಸಲು ಯಾವುದೇಸಮಯದ ಗಡುವು ಕೊಡಲಾಗಿಲ್ಲ. ಇತ್ತೀಚೆಗೆ, ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕರಾಗಿದ್ದ ರಾಕೇಶ್‌ ಅಸ್ತಾನಾ ಅವರು ಪರಸ್ಪರರ ಮೇಲೆ ಮಾಡಿದ್ದ ಆರೋಪಗಳಬಗ್ಗೆಯೂ ಪಟ್ನಾಯಕ್‌ನೇತೃತ್ವದ ಸಮಿತಿಯುತನಿಖೆ ನಡೆಸಿ ವರದಿಸಲ್ಲಿಸಿತ್ತು.

ನ್ಯಾಯಪೀಠ ಹೇಳಿದ್ದು...

* ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ ಎಂದು ಶ್ರೀಮಂತರು ಹಾಗೂ ಪ್ರಬಾವಿಗಳಿಗೆ ಹೇಳುವ ಕಾಲ ಬಂದಿದೆ.

* ಯಾರನ್ನೂ ಹೆಸರಿಸುವುದಿಲ್ಲ, ಆದರೆ ಪ್ರಭಾವ ಬೀರುವ ಪ್ರಯತ್ನ ಯಾವಾಗಿನಿಂದಲೂ ನಡೆಯುತ್ತಿದೆ. ಇದು ಗಂಭೀರ ವಿಚಾರ

* ಪೀಠದ ಮೇಲೆ ಪ್ರಭಾವ ಬೀರುವ (ಫಿಕ್ಸ್‌ ಮಾಡುವ) ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವಿಫಲರಾಗಿರುವವರು ಯಾವುದೇ ಅಳುಕಿಲ್ಲದೆ ಓಡಾಡುತ್ತಿದ್ದಾರೆ. ವಕೀಲರ ಬಳಿಗೆ ಯಾರನ್ನೋ ಕಳುಹಿಸುತ್ತಿದ್ದಾರೆ.

* ಹಣಬಲದ ಮೂಲಕ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.