ADVERTISEMENT

ವಿವಾದಾತ್ಮಕ ಹೇಳಿಕೆ: ಕೊಲಿಜಿಯಂ ಮುಂದೆ ನ್ಯಾ.ಯಾದವ್‌ ಹಾಜರಾಗುವ ಸಾಧ್ಯತೆ

ಪಿಟಿಐ
Published 15 ಡಿಸೆಂಬರ್ 2024, 13:47 IST
Last Updated 15 ಡಿಸೆಂಬರ್ 2024, 13:47 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ಅವರು ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮುಂದೆ ಹಾಜರಾಗಿ ವಿವರಣೆ ನೀಡುವ ಸಾಧ್ಯತೆಯಿದೆ.

ಶೇಖರ್‌ ಅವರು ನೀಡಿರುವ ಹೇಳಿಕೆಗಳ ಕುರಿತ ಸುದ್ದಿಗಳನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್‌, ವಿವರಣೆ ನೀಡುವಂತೆ ಅಲಹಾಬಾದ್‌ ಹೈಕೋರ್ಟ್‌ಗೆ ಇತ್ತೀಚೆಗೆ ಸೂಚಿಸಿತ್ತು. 

ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ಯಾವುದೇ ವಿವಾದಾತ್ಮಕ ಹೇಳಿಕೆಗಳು ವ್ಯಕ್ತವಾದ ಸಂದರ್ಭದಲ್ಲಿ ಆ ಕುರಿತು ಸುಪ್ರೀಂ ಕೋರ್ಟ್‌ ವಿವರಣೆಗಳನ್ನು ಕೇಳುತ್ತದೆ. ಅಲ್ಲದೆ ಸಂಬಂಧಿಸಿದ ನ್ಯಾಯಮೂರ್ತಿಗೂ ತಮ್ಮ ಹೇಳಿಕೆ ಕುರಿತು ವಿವರಣೆ ನೀಡಲು ಕೊಲಿಜಿಯಂ ಅವಕಾಶ ನೀಡುತ್ತದೆ.

ADVERTISEMENT

ಆ ನಿಟ್ಟಿನಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಸಹ ಕೊಲಿಜಿಯಂ ಮುಂದೆ ಹಾಜರಾಗಿ ವಿವರಣೆ ನೀಡುವ ಸಾಧ್ಯತೆಗಳಿವೆ ಎಂದು ಸುಪ್ರೀಂ ಕೋರ್ಟ್‌ನ ಮೂಲಗಳು ತಿಳಿಸಿವೆ.

ಡಿ 8ರಂದು ನಡೆದ ವಿಎಚ್‌ಪಿ ಕಾನೂನು ವಿಭಾಗದ ಪ್ರಾಂತೀಯ ಸಮಾರಂಭದಲ್ಲಿ ಏಕರೂಪ ನಾಗರಿಕ ಸಂಹಿತೆಯ ಮುಖ್ಯ ಉದ್ದೇಶ ಸಾಮಾಜಿಕ ಸೌಹಾರ್ದ, ಲಿಂಗ ಸಮಾನತೆ ಮತ್ತು ಧರ್ಮನಿರಪೇಕ್ಷತೆಯನ್ನು ಉತ್ತೇಜಿಸುವುದು ಎಂದು ನ್ಯಾಯಮೂರ್ತಿ ಯಾದವ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.