ADVERTISEMENT

ನ್ಯಾ. ವರ್ಮಾ ಪದಚ್ಯುತಿಗೆ ಕೇಂದ್ರ ಸರ್ಕಾರದಿಂದ ಸಂಸದರ ಸಹಿ ಸಂಗ್ರಹ ಶೀಘ್ರ

ಪಿಟಿಐ
Published 3 ಜುಲೈ 2025, 10:01 IST
Last Updated 3 ಜುಲೈ 2025, 10:01 IST
<div class="paragraphs"><p>ನ್ಯಾಯಮೂರ್ತಿ ಯಶವಂತ ವರ್ಮಾ ಹಾಗೂ ಅಲಹಾಬಾದ್‌ ಹೈಕೋರ್ಟ್‌</p></div>

ನ್ಯಾಯಮೂರ್ತಿ ಯಶವಂತ ವರ್ಮಾ ಹಾಗೂ ಅಲಹಾಬಾದ್‌ ಹೈಕೋರ್ಟ್‌

   

ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯಕ್ಕೆ ಪ್ರಮುಖ ವಿರೋಧ ಪಕ್ಷಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಸಂಸದರ ಸಹಿ ಸಂಗ್ರಹ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಪ್ರಸ್ತಾವನೆಯನ್ನು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಂಡಿಸಬೇಕೆ ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಸ್ತಾವನೆಗೆ ಅನುಮೋದನೆ ಸಿಗಲು ಲೋಕಸಭೆಯಲ್ಲಿ ಕನಿಷ್ಠ 100 ಹಾಗೂ ರಾಜ್ಯಸಭೆಯಲ್ಲಿ ಕನಿಷ್ಠ 50 ಸಂಸದರ ಸಹಿ ಬೇಕು.

ಯಾವ ಮನೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಬೇಕು ಎಂದು ಸರ್ಕಾರ ತೀರ್ಮಾನಿಸಿದ ಬಳಿಕ ಸಹಿ ಸಂಗ್ರಹ ನಡೆಯಲಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 21ರಿಂದ ಆರಂಭವಾಗಿ ಆಗಸ್ಟ್ 21ರವರೆಗೆ ನಡೆಯಲಿದೆ.

ನ್ಯಾಯಮೂರ್ತಿಗಳ (ಪದಚ್ಯುತಿ) ಕಾಯ್ದೆ 1968ರ ಅನ್ವಯ, ನ್ಯಾಯಮೂರ್ತಿಯನ್ನು ಹುದ್ದೆಯಿಂದ ತೆಗೆದು ಹಾಕುವ ಪ್ರಸ್ತಾವನೆಯನ್ನು ಸಂಸತ್ತಿನ ಯಾವುದೇ ಮನೆಯಲ್ಲಿ ಸ್ವೀಕರಿಸಿದ ಬಳಿಕ ಪದಚ್ಯುತಗೊಳಿಸುವ ಕಾರಣ ತನಿಖೆಗೆ ಸ್ಪೀಕರ್ ಅಥವಾ ಸಭಾಪತಿ ಮೂರು ಮಂದಿಯ ಸಮಿತಿ ರಚಿಸಬೇಕು.

ಈ ಸಮಿತಿಯಲ್ಲಿ ಭಾರತದ ಮುಖ್ಯನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿ, 25 ಹೈಕೋರ್ಟ್‌ಗಳ ಪೈಕಿ ಒಂದು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಹಾಗೂ ವಿಶಿಷ್ಟ ನ್ಯಾಯಶಾಸ್ತ್ರಜ್ಞ ಇರಬೇಕು.

ಏನಿದು ಪ್ರಕರಣ:

2025ರ ಮಾರ್ಚ್‌ 14ರಂದು ರಾತ್ರಿ 11.35ರ ವೇಳೆಗೆ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ನಗದು ಪತ್ತೆಯಾದ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಾ.22ರಂದು ಆಗಿನ ಸಿಜೆಐ ಸಂಜೀವ್‌ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದರು.

ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೂ ಈ ವಿಚಾರಣಾ ಸಮಿತಿ ಒಳಗೊಂಡಿತ್ತು. ಈ ಸಮಿತಿಯ ವರದಿಯನ್ನು ಆಧರಿಸಿ ಸಂಜೀವ್‌ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವರ್ಮಾ ಅವರ ವಾಗ್ದಂಡನೆಗೆ ಶಿಫಾರಸು ಕೂಡ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.