ADVERTISEMENT

ನಾಲ್ವರು ನ್ಯಾಯಮೂರ್ತಿಗಳ ನೇಮಕ ಪದ್ಧತಿಗೆ ಚಂದ್ರಚೂಡ್‌, ನಜೀರ್‌ ವಿರೋಧ

ಸುಪ್ರೀಂ ಕೋರ್ಟ್‌ನ ಕೊಲಿಜಿಯಂನಲ್ಲಿ ಮುಂದುವರಿದ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 15:54 IST
Last Updated 10 ಅಕ್ಟೋಬರ್ 2022, 15:54 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನಾಲ್ಕು ಹುದ್ದೆಗಳಿಗೆ ಸುತ್ತೋಲೆ ಪದ್ಧತಿ ಮೂಲಕ ನ್ಯಾಯಮೂರ್ತಿಗಳನ್ನು ನೇಮಿಸಲು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ಕೊಲಿಜಿಯಂ ಮುಂದಾಗಿದ್ದು, ಈ ಪ್ರಕ್ರಿಯೆಗೆ ಕೊಲಿಜಿಯಂನ ಸದಸ್ಯರಾದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ಎಸ್‌.ಅಬ್ದುಲ್‌ ನಜೀರ್‌ ವಿರೋಧ ವ್ಯಕ್ತಪಡಿಸಿದ್ದಾರೆ.

34 ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ ಐದು ಹುದ್ದೆಗಳು ಖಾಲಿ ಇದ್ದವು. ಲಲಿತ್‌, ಚಂದ್ರಚೂಡ್‌, ನಜೀರ್‌, ಸಂಜಯ್‌ ಕಿಶನ್‌ ಕೌಲ್‌ ಮತ್ತು ಕೆ.ಎಂ.ಜೋಸೆಫ್‌ ಅವರನ್ನೊಳಗೊಂಡ ಕೊಲಿಜಿಯಂ, ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಈ ಹಿಂದೆ ಒಪ್ಪಿಗೆ ಸೂಚಿಸಿತ್ತು.

‘ಇತರ ನಾಲ್ಕು ಮಂದಿ ನ್ಯಾಯಮೂರ್ತಿಗಳ ನೇಮಕ ಸಂಬಂಧ ನಿರ್ಣಯ ಕೈಗೊಳ್ಳಲು ಸೆಪ್ಟೆಂಬರ್ 30ರಂದು ಕೊಲಿಜಿಯಂ ಸಭೆ ನಿಗದಿಯಾಗಿತ್ತು. ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಆ ದಿನ ರಾತ್ರಿ 9 ಗಂಟೆವರೆಗೂ ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾಗಿದ್ದರಿಂದ ಸಭೆ ರದ್ದಾಗಿತ್ತು. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರವಿಶಂಕರ್‌ ಝಾ, ಪಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕರೋಲ್‌, ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ವಿ.ಸಂಜಯ್‌ ಕುಮಾರ್‌ ಹಾಗೂ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್‌ ಅವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಕುರಿತ ಪ್ರಸ್ತಾವನೆಯೊಂದನ್ನು ಲಲಿತ್‌ ಅವರು ಸೆಪ್ಟೆಂಬರ್‌ 30ರಂದೇ ಕೊಲಿಜಿಯಂನ ಸದಸ್ಯರಿಗೆ ಕಳುಹಿಸಿದ್ದರು. ಇದಕ್ಕೆ ನ್ಯಾಯಮೂರ್ತಿಗಳಾದ ಕೌಲ್‌ ಮತ್ತು ಜೋಸೆಫ್‌ ಅನುಮೋದನೆ ನೀಡಿದ್ದರು. ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದ್ದ ನೇಮಕಾತಿ ಪದ್ಧತಿಗೆ ಚಂದ್ರಚೂಡ್‌ ಹಾಗೂ ನಜೀರ್‌ ಅವರು ವಿರೋಧ ವ್ಯಕ್ತಪಡಿಸಿದ್ದರು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಇದೇ 2 ರಂದು ಕೊಲಿಜಿಯಂ ಸದಸ್ಯರಿಗೆ ಮತ್ತೊಂದು ಪತ್ರ ಬರೆದಿದ್ದ ಲಲಿತ್‌ ಅವರು ಪರ್ಯಾಯ ಸಲಹೆಗಳನ್ನು ಆಹ್ವಾನಿಸಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ’ ಎಂದು ತಿಳಿಸಿದೆ.

ಈ ಪ್ರಕಟಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.