ADVERTISEMENT

ಕೆ.ಎಂ.ಜೋಸೆಫ್ ಸೇವಾ ಹಿರಿತನ ಕಡೆಗಣನೆ: ಸಿಜೆಐ ಭೇಟಿಯಾದ ನ್ಯಾಯಮೂರ್ತಿಗಳು

ಪಿಟಿಐ
Published 6 ಆಗಸ್ಟ್ 2018, 18:56 IST
Last Updated 6 ಆಗಸ್ಟ್ 2018, 18:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಸೇವಾ ಹಿರಿತನ ಕಡೆಗಣಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸೋಮವಾರ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಭೇಟಿಯಾಗಿ ಪ್ರತಿಭಟನೆ ದಾಖಲಿಸಿದ್ದಾರೆ.

ಕೊಲಿಜಿಯಂ ಸದಸ್ಯರಾಗಿರುವ ನ್ಯಾಯಮೂರ್ತಿಗಳಾದ ಎಂ.ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ನ್ಯಾಯಾಲಯ ಕಲಾಪ ಆರಂಭವಾಗುವ ಮೊದಲು ಚಹಾ ಸಮಯದಲ್ಲಿ ಮಿಶ್ರಾ ಅವರನ್ನು ಭೇಟಿಯಾಗಿ ಚರ್ಚಿಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರಜೆಯಲ್ಲಿದ್ದ ಕಾರಣ ನ್ಯಾಯಮೂರ್ತಿಗಳ ತಂಡದಲ್ಲಿ ಇರಲಿಲ್ಲ.

ADVERTISEMENT

ಜೋಸೆಫ್‌ ಹಿರಿತನ ಕಡೆಗಣನೆ ವಿಷಯವನ್ನು ರಂಜನ್‌ ಗೊಗೊಯಿ ಅವರ ಜತೆ ಚರ್ಚಿಸಿ, ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಮಿಶ್ರಾ ಅವರು ನ್ಯಾಯಮೂರ್ತಿಗಳಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ನೇಮಕವಾದ ಮೂವರು ನ್ಯಾಯಮೂರ್ತಿಗಳಲ್ಲಿ ಸೇವಾ ಹಿರಿತನ ಹೊಂದಿರುವ ಜೋಸೆಫ್ ಅವರ ಹೆಸರು ಪಟ್ಟಿಯಲ್ಲಿ ಕೊನೆಯಲ್ಲಿದೆ. ಇದು ನ್ಯಾಯಮೂರ್ತಿಗಳು ಮತ್ತು ಕೊಲಿಜಿಯಂ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
**

ಇಂದು ಅಧಿಕಾರ ಸ್ವೀಕಾರ
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್‌ ಶರಣ್‌ ಮತ್ತು ಕೆ.ಎಂ. ಜೋಸೆಫ್‌ ಮಂಗಳವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಉತ್ತರಾಖಂಡ, ಮದ್ರಾಸ್‌ ಮತ್ತು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜೋಸೆಫ್, ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಅವರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿತ್ತು.
**

ಕೇಂದ್ರದ ಸಿಟ್ಟಿಗೆ ಕಾರಣ!
ಹರೀಶ್‌ ರಾವತ್‌ ನೇತೃತ್ವದ ಉತ್ತರಾಖಂಡದ ಕಾಂಗ್ರೆಸ್‌ನ ಸರ್ಕಾರವನ್ನು ವಜಾ ಮಾಡಿ 2016ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೋಸೆಫ್‌ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಧಾರವನ್ನು ರದ್ದು ಮಾಡಿದ್ದರು.

ಇದುವೇ ಜೋಸೆಫ್‌ ವಿರುದ್ಧ ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದಾಗಿಯೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಜೋಸೆಫ್ ಅವರನ್ನು ನೇಮಕ ಮಾಡುವಂತೆ ಕೊಲಿಜಿಯಂ ಕಳುಹಿಸಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.