ADVERTISEMENT

ಕಲ್ಲಕುರಿಚಿ ಕೇಸ್: ಮರು ಮರಣೋತ್ತರ ಪರೀಕ್ಷೆ, ಎಸ್‌ಐಟಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಪಿಟಿಐ
Published 18 ಜುಲೈ 2022, 9:54 IST
Last Updated 18 ಜುಲೈ 2022, 9:54 IST
ಕಲ್ಲಕುರಿಚಿ ಹಿಂಸಾಚಾರ: ರಾಯಿಟರ್ಸ್ ಚಿತ್ರ
ಕಲ್ಲಕುರಿಚಿ ಹಿಂಸಾಚಾರ: ರಾಯಿಟರ್ಸ್ ಚಿತ್ರ   

ಚೆನ್ನೈ: ತಮಿಳುನಾಡಿನ ಕಲ್ಲಕುರಚಿ ಜಿಲ್ಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್, ಅಲ್ಲಿನ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗಲಭೆಕೋರರನ್ನು ಪತ್ತೆ ಮಾಡಲು ಎಸ್‌ಐಟಿ ರಚಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿರುವ ನ್ಯಾಯಾಲಯವು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕಟ್ಟಪ್ಪಣೆ ಮಾಡಿದೆ.

ವಿಶೇಷ ತನಿಖಾ ತಂಡದ ತನಿಖೆ ಬಳಿಕ ಗಲಭೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಹೇಳಿದ್ದಾರೆ.

ಕಲ್ಲುಕುರಿಚಿಯ ಖಾಸಗಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿಯ ಸಾವು ಖಂಡಿಸಿ ಭಾನುವಾರ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಹಲವೆಡೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿದೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾದ ಕೆಲ ಪೊಲೀಸರಿಗೂ ಗಾಯಗಳಾಗಿವೆ.

ADVERTISEMENT

ಪೊಲೀಸರು ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ನಿಯಂತ್ರಿಸಬೇಕು ಮತ್ತು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕಿಯ ತಂದೆ ಪಿ ರಾಮಲಿಂಗಂ ಅವರ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶಗಳನ್ನು ಹೊರಡಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.

ಬಾಲಕಿಯ ತಂದೆ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಬಾಲಕಿಯ ಮೃತದೇಹದ ಮರು ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲು ಆದೇಶಿಸಬೇಕು ಎಂದೂ ಬಾಲಕಿಯ ತಂದೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲ ಮೊಹಮ್ಮದ್ ಹಸನ್ ಜಿನ್ನಾ, ರಾಜ್ಯ ಸರ್ಕಾರವು ಈಗಾಗಲೇ ಪ್ರಕರಣವನ್ನು ತನಿಖಾ ಸಂಸ್ಥೆಗೆ ವರ್ಗಾಯಿಸಿದೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ತನಿಖೆ ಮುಂದುವರಿದಿದ್ದು, ಹಲವರನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಮೂವರು ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಅದನ್ನು ವಿಡಿಯೊ ಚಿತ್ರೀಕರಿಸಬೇಕು ಎಂದು ನ್ಯಾಯಾಧೀಶರು ಹೇಳಿದರು. ಹುಡುಗಿಯ ತಂದೆ ಬಯಸಿದರೆ ಅವರ ವಕೀಲರೊಂದಿಗೆ ಅವರಿಗೂ ಮರಣೋತ್ತರ ಪರಿಕ್ಷೆ ವೇಳೆ ಹಾಜರಿರಲು ಅವಕಾಶ ನೀಡಬಹುದು ಎಂದು ನ್ಯಾಯಾಧೀಶರು ಹೇಳಿದರು.

ಭಾನುವಾರದಂದು ಟಿವಿ ಮೂಲಕ ಹಿಂಸಾತ್ಮಕ ಘಟನೆಗಳನ್ನು ವೀಕ್ಷಿಸಿದ್ದ ನ್ಯಾಯಾಧೀಶರು, ಗಲಭೆಕೋರರು ಇಂತಹ ಹಿಂಸಾತ್ಮಕ ಘಟನೆಗಳನ್ನು ಹೇಗೆ ನಡೆಸಿದರು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗಲಭೆಕೋರರು ಖಾಸಗಿ ಮತ್ತು ಸರ್ಕಾರಿ ಆಸ್ತಿಗೆ ಆಗಿರುವ ನಷ್ಟವನ್ನು ತುಂಬಿಕೊಡಬಲ್ಲರೇ? ತಮಿಳುನಾಡು ಶಾಂತಿಯುತ ರಾಜ್ಯವಾಗಿದೆ. ಆದರೆ, ಗಲಭೆಕೋರರು ಆ ಹೆಸರನ್ನು ಹಾಳು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಸಂಪೂರ್ಣ ಅವ್ಯವಸ್ಥೆ, ಕಾನೂನುರಹಿತ ವ್ಯವಸ್ಥೆಯಂತೆ ಗೋಚರಿಸುತ್ತಿದೆ ಎಂದು ಎಸ್‌ಐಟಿ ರಚನೆಗೆ ಡಿಜಿಪಿಗೆ ನಿರ್ದೇಶನ ನೀಡುವ ಸಂದರ್ಭ ನ್ಯಾಯಾಲಯ ಹೇಳಿದೆ. ಜುಲೈ 29ರ ಒಳಗೆ ವರದಿ ಸಲ್ಲಿಸುವಂತೆಯೂ ಕೋರ್ಟ್ ಸೂಚಿಸಿದೆ. ಇದೇವೇಳೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಅಪಪ್ರಚಾರ ನಡೆಸುವವರ ವಿರುದ್ಧವೂ ಕಠಿಣ ಕ್ರಮಕ್ಕೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.