ADVERTISEMENT

‘ಮದ್ಯ’ರಾತ್ರಿ ಗಲಾಟೆ: ನ್ಯಾಯಮೂರ್ತಿ ತರಾಟೆ

ನಿದ್ದೆಗೆಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 20:26 IST
Last Updated 7 ಫೆಬ್ರುವರಿ 2019, 20:26 IST
   

ನವದೆಹಲಿ: ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಇಲ್ಲಿಗೆ ಬಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿರುವ ಕೆಲವರು ಮದ್ಯಪಾನ ಮಾಡಿ, ಜೋರಾಗಿ ಮಾತನಾಡಿದ್ದರಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಇಲ್ಲಿನ ಕರ್ನಾಟಕ ಭವನದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ನೇತೃತ್ವದ ನಿಯೋಗದೊಂದಿಗೆ ಬೆಂಗಳೂರಿನಿಂದ ಬಂದಿರುವ ಪ್ರಾಧಿಕಾರದ ಸದಸ್ಯರು, ಕೆಲವು ಸಾಹಿತಿಗಳು, ಸ್ಥಳೀಯ ಅಧ್ಯಾಪಕರು ಮತ್ತು ದೆಹಲಿ ಕನ್ನಡ ಸಂಘದ ಕೆಲವು ಪದಾಧಿಕಾರಿಗಳು ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ–1ರಲ್ಲಿ ವಾಸ್ತವ್ಯ ಹೂಡಿದ್ದರು. ನಿಯೋಗದಲ್ಲಿದ್ದ ಕೆಲವರು ರಾತ್ರಿ ಮದ್ಯ ಸೇವಿಸಿ ಹರಟೆ ಹೊಡೆಯುವಾಗ ಪಕ್ಕದ ಕೊಠಡಿಯಲ್ಲಿದ್ದ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರ ನಿದ್ರೆಗೆ ಅಡಚಣೆ ಆಗಿದ್ದರಿಂದ, ಮೆಲುದನಿಯಲ್ಲಿ ಮಾತನಾಡುವಂತೆ ತಿಳಿಸಿದ್ದಾರೆ.

ಗಲಾಟೆ ಜೋರಾಗಿದ್ದರಿಂದ ಅವರು ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ‘ಸರ್ಕಾರಿ ಭವನದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುವುದು ಸರಿಯಲ್ಲ’ ಎಂದು ಸಿಟ್ಟಿಗೆದ್ದ ಅವರು, ಚಾಣಕ್ಯಪುರಿ ಠಾಣೆಯ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮೌಖಿಕವಾಗಿ ದೂರು ನೀಡಿದ್ದಾರೆ.

ADVERTISEMENT

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆಯಲ್ಲಿ ನಿರತರಾಗಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಆಗ ಸ್ಥಳಕ್ಕೆ ಬಂದ, ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್‌ ಮಿತಾಶ್‌, ‘ಜೋರಾಗಿ ಮಾತನಾಡಿದವರೆಲ್ಲ ಕನ್ನಡದ ಕಾರ್ಯಕ್ಕೆ ಬಂದವರಾಗಿದ್ದಾರೆ. ಅವರಿಂದ ಯಾವುದೇ ರೀತಿಯ ಪ್ರಮಾದ ನಡೆದಿಲ್ಲ. ಒಂದೊಮ್ಮೆ ನಿಮಗೆ ತೊಂದರೆ ಆಗಿದ್ದಲ್ಲಿ ಕ್ಷಮಿಸಿ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವೆ’ ಎಂದು ಮನವಿ ಮಾಡಿದ ನಂತರ ನ್ಯಾಯಮೂರ್ತಿಗಳು ಲಿಖಿತ ದೂರು ನೀಡದಿರಲು ನಿರ್ಧರಿಸಿದ್ದಾರೆ.

ಚಾಣಕ್ಯಪುರಿ ಠಾಣೆಯ 25ಕ್ಕೂ ಹೆಚ್ಚು ಪೊಲೀಸರೊಂದಿಗೆ ಬಂದಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳು, ‘ಇಂತಹ ಘಟನೆಗಳು ಮರುಕಳಿಸದಂತೆ ತೀವ್ರ ನಿಗಾ ಇರಿಸಬೇಕು’ ಎಂದು ನಿವಾಸಿ ಆಯುಕ್ತರಿಗೆ ಎಚ್ಚರಿಸಿದ್ದಾರೆ.

ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ, ಸಾಹಿತಿಗಳಾದ ಸಿದ್ದಲಿಂಗಯ್ಯ, ಬಿ.ಟಿ. ಲಲಿತಾ ನಾಯಕ್‌, ಕಾಳೇಗೌಡ ನಾಗವಾರ, ಸಿ.ಎಫ್‌. ನಾಯ್ಕ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ, ಡಾ.ಎಚ್‌.ಎಸ್‌. ಶಿವಪ್ರಕಾಶ, ಡಾ.ಪುರುಷೋತ್ತಮ ಬಿಳಿಮಲೆ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ ಅವರು ನಿಯೋಗದಲ್ಲಿದ್ದರು.‌

ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಿವಾಸಿ ಆಯುಕ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

* ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದೇನೆ. ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮುಂದಾದರು ಎಂಬುದು ಸತ್ಯಕ್ಕೆ ದೂರವಾದದ್ದು

-ಎಸ್‌.ಜಿ ಸಿದ್ದರಾಮಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

* ನಿಯೋಗದೊಂದಿಗೆ ಕೇಂದ್ರದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಕರ್ನಾಟಕ ಭವನದಲ್ಲಿ ಊಟ ಮಾಡಿ ಮಲಗಿದ್ದೆ. ಈ ಕುರಿತು ನನಗೇನು ಗೊತ್ತಿಲ್ಲ.

-ಮನು ಬಳಿಗಾರ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.