ಕಾಂಗ್ರೆಸ್ ಸೇರ್ಪಡೆಯಾದ ಕಣ್ಣನ್ ಗೋಪಿನಾಥನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪವನ್ ಖೇರಾ, ಕನ್ಹಯ್ಯಾ ಕುಮಾರ್ ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಕೇರಳದ ಕಣ್ಣನ್ ಗೋಪಿನಾಥನ್ ಅವರು ಸೋಮವಾರ ಕಾಂಗ್ರೆಸ್ ಸೇರಿದರು. ‘ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು’ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರಿಂದ ಅಲ್ಲಿನ ಜನರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿ ಕಣ್ಣನ್ ಅವರು 2019ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹಾಗೂ ಪಕ್ಷದ ಮುಖಂಡರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
‘ಗೋಪಿನಾಥನ್ ಅವರು ದೇಶದ ದೀನದಲಿತರ ಮತ್ತು ತಳ ಸಮುದಾಯದ ಜನರ ಬಗ್ಗೆ ಕಾಳಜಿ ಹೊಂದಿರುವ, ಯಾವಾಗಲೂ ನ್ಯಾಯ ಹಾಗೂ ಒಗ್ಗಟ್ಟಿಗಾಗಿ ಹೋರಾಡಿದ ಧೈರ್ಯಶಾಲಿ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಕೇರಳದಲ್ಲಿ ಜನಿಸಿದ ಅವರು ಈಶಾನ್ಯ ರಾಜ್ಯಗಳು ಮತ್ತು ದೇಶದ ಇತರ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ’ ಎಂದು ವೇಣುಗೋಪಾಲ್ ಹೇಳಿದರು.
‘ಅವರು ಐಎಎಸ್ ಹುದ್ದೆಗೆ 2019ರಲ್ಲಿ ರಾಜೀನಾಮೆ ನೀಡಿದರು. ಆದರೆ, ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ. ನ್ಯಾಯಕ್ಕಾಗಿ ಹೋರಾಡುವ ಅಧಿಕಾರಿಗಳನ್ನು ಸರ್ಕಾರವು ಶಿಕ್ಷಿಸುತ್ತಿದೆ’ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ ಎಂಬುದು ಮನವರಿಕೆಯಾದಾಗ ಐಎಎಸ್ ಹುದ್ದೆ ತ್ಯಜಿಸಿದೆ. ಸರ್ಕಾರ ಮಾಡುತ್ತಿರುವ ತಪ್ಪಿನ ವಿರುದ್ಧ ನಾನು ಹೋರಾಡಬೇಕು.– ಕಣ್ಣನ್ ಗೋಪಿನಾಥನ್, ಮಾಜಿ ಐಎಎಸ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.