ADVERTISEMENT

ಮಾಯಾವತಿಯಿಂದ ಬಿಎಸ್‌ಪಿ ಹೈಜಾಕ್‌: ಕಾನ್ಶಿರಾಮ್‌ ಕುಟುಂಬಸ್ಥರ ಆರೋಪ 

ಐಎಎನ್ಎಸ್
Published 26 ನವೆಂಬರ್ 2021, 5:44 IST
Last Updated 26 ನವೆಂಬರ್ 2021, 5:44 IST
ಮಾಯಾವತಿ
ಮಾಯಾವತಿ    

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸೋಲಿಸುವ ಯಾರಿಗಾದರೂ ಬೆಂಬಲ ನೀಡುವುದಾಗಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ದಿವಂಗತ ಕಾನ್ಶಿ ರಾಮ್‌ ಅವರ ಕುಟುಂಬಸ್ಥರು ಶುಕ್ರವಾರ ಹೇಳಿದ್ದಾರೆ.

ಮಾಯಾವತಿ ಅವರು ತಮ್ಮ ಕುಟುಂಬಸ್ಥರಿಗಾಗಿ ಬಿಎಸ್‌ಪಿ ಪಕ್ಷವನ್ನು ಕಸಿದುಕೊಂಡಿದ್ದಾರೆ ಎಂದು ಕಾನ್ಶಿರಾಮ್ ಅವರ ತಂಗಿ ಮತ್ತು ಸೋದರಳಿಯ ಆರೋಪಿಸಿದ್ದಾರೆ.

ಮಾಜಿ ಶಾಸಕಿ ಸಾವಿತ್ರಿಬಾಯಿ ಫುಲೆ ಅವರು ಸಂವಿಧಾನ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾನ್ಶಿರಾಮ್‌ ಕುಟುಂಬಸ್ಥರು ಲಖನೌಗೆ ಬಂದಿದ್ದಾರೆ.

ADVERTISEMENT

‘ಮಾಯಾವತಿ ಸಂವಿಧಾನ ವಿರೋಧಿ. ಕಾನ್ಶಿ ರಾಮ್ ಸ್ಥಾಪಿಸಿದ್ದ ಪಕ್ಷವನ್ನು ಮುಗಿಸಿದ್ದಾರೆ. ಅವರು ಪಕ್ಷವನ್ನು ಕುಟುಂಬದ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಅವರಿಂದ ಬಡವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ಕಾನ್ಶಿ ರಾಮ್ ಅವರ ಸಹೋದರಿ ಸ್ವರ್ಣ್ ಕೌರ್ ಹೇಳಿದ್ದಾರೆ.

ನಮ್ಮ ಕುಟುಂಬಕ್ಕೆ ಯಾವುದೇ ರಾಜಕೀಯ ಪಕ್ಷದೊಂದಿಗೂ ಸಂಬಂಧವಿಲ್ಲ ಎಂದು ‘ಕಾನ್ಶಿರಾಮ್ ಫೌಂಡೇಶನ್’ನ ಮುಖ್ಯಸ್ಥೆಯೂ ಆಗಿರುವ ಸ್ವರ್ಣ್ ಕೌರ್ ಹೇಳಿದ್ದಾರೆ.

‘ನಾವು ಗುರುವಾರ ಲಖನೌನಲ್ಲಿರುವ ಕಾನ್ಶಿರಾಮ್ ಸ್ಮಾರಕಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿ ರಾಮ್‌ ಅವರೊಂದಿಗೆ ಮಾಯಾವತಿ ಅವರ ಪ್ರತಿಮೆ ಇರುವುದು ನೋಡಿ ಬೇಸರಗೊಂಡೆವು,’ ಎಂದು ಸೋದರಳಿಯ ಲಖ್ಬೀರ್ ಸಿಂಗ್ ಹೇಳಿದ್ದಾರೆ.

‘ಮಾಯಾವತಿ ಬಿಎಸ್‌ಪಿಯನ್ನು ಹೈಜಾಕ್ ಮಾಡಿ ಖಾಸಗಿ ಸಂಸ್ಥೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿಯನ್ನು ಸೋಲಿಸುವ ಯಾರಿಗಾದರೂ ನಾವು ಬೆಂಬಲ ನೀಡುತ್ತೇವೆ. ನಾವು ಪಂಜಾಬ್‌ನಲ್ಲಿ ಬಿಎಸ್‌ಪಿ ವಿರುದ್ಧ ಪ್ರಚಾರ ಮಾಡುತ್ತೇವೆ. ಅಲ್ಲಿ ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.