ಕಾವಡ್ ಯಾತ್ರಾರ್ಥಿಗಳು ( ಸಂಗ್ರಹ ಚಿತ್ರ)
ಲಖನೌ: ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್‌ಗಳು, ತಿಂಡಿ–ತಿನಿಸು ಮಳಿಗೆಗಳ ಮಾಲೀಕರ ಹೆಸರುಗಳನ್ನು ತಿಳಿಯಲು ಅಂಗಡಿಗಳ ಮೇಲೆ ಅಂಟಿಸಿರುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವಂತೆ ಯಾತ್ರಾರ್ಥಿಗಳಿಗೆ ಉತ್ತರ ಪ್ರದೇಶ ಸರ್ಕಾರ ನಿರ್ದೇಶನ ನೀಡಿದೆ.
ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ ಸಿಬ್ಬಂದಿಯ ಧರ್ಮ ಪತ್ತೆ ಮಾಡಲು ಕೆಲವು ಹಿಂದೂ ಸಂಘಟನೆಗಳು ತೆಗದುಕೊಂಡ ಕ್ರಮ ವಿವಾದಕ್ಕೀಡಾಗಿರುವಂತೆಯೇ ರಾಜ್ಯ ಸರ್ಕಾರ ಈ ನಿರ್ದೇಶನ ನೀಡಿದೆ.
ಮೀರತ್‌ನಿಂದ ಮುಜಾಫ್ಫರ್‌ನಗರದ ವರೆಗಿನ 540 ಕಿ.ಮೀ.ವರೆಗಿನ ಕಾವಡ್ ಯಾತ್ರಾ ಮಾರ್ಗದಲ್ಲಿರುವ ಎಲ್ಲಾ ಮಳಿಗೆಗಳ ಮೇಲೆ ರಾಜ್ಯ ಆಹಾರ ಇಲಾಖೆಯ ಅಧಿಕಾರಿಗಳು ಕ್ಯೂಆರ್ ಕೋಡ್ ಅಳವಡಿಸಲಿದ್ದಾರೆ. ಅದರಲ್ಲಿ ಮಳಿಗೆಯ ಮಾಲೀಕರ ಹೆಸರು, ವಿಳಾಸ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷಗಳು ಆಕ್ಷೇಪಿಸಿವೆ. ಆದರೆ, ಕಾವಡ್ ಯಾತ್ರೆಯ ಪಾವಿತ್ರ್ಯತೆ ಕಾಪಾಡುವುದು ಪ್ರಮುಖವಾಗಿದ್ದು, ಪ್ರತಿಯೊಬ್ಬ ಯಾತ್ರಾರ್ಥಿಗೂ ತಾನು ಎಲ್ಲಿಯ ಆಹಾರ ಸೇವಿಸುತ್ತಿದ್ದೇನೆ ಎಂಬುದನ್ನು ತಿಳಿಯುವ ಹಕ್ಕಿದೆ. ಹೀಗಾಗಿ ಸರ್ಕಾರ ಕೈಗೊಂಡ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.