ADVERTISEMENT

'ಸ್ವತಂತ್ರ ದನಿಯಾಗುವುದು ಮುಖ್ಯ': ಕಾಂಗ್ರೆಸ್‌ ತೊರೆದ ಕಪಿಲ್‌ ಸಿಬಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2022, 10:04 IST
Last Updated 25 ಮೇ 2022, 10:04 IST
ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಪಿಲ್‌ ಸಿಬಲ್‌
ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಪಿಲ್‌ ಸಿಬಲ್‌   

ನವದೆಹಲಿ: ಕಪಿಲ್‌ ಸಿಬಲ್‌ ಅವರು ಬುಧವಾರ ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷವು ಅವರ ಬೆನ್ನಿಗೆ ನಿಂತಿದೆ. ಮೇ 16ರಂದು ಕಾಂಗ್ರೆಸ್‌ ತೊರೆದಿರುವುದಾಗಿ ಸಿಬಲ್‌ ಹೇಳಿದ್ದಾರೆ.

ಕಾಂಗ್ರೆಸ್‌ನ ಭಿನ್ನಮತೀಯ ಗುಂಪು 'ಜಿ23'ರಲ್ಲಿ ಪ್ರಮುಖರಾಗಿದ್ದ ಸಿಬಲ್‌ ಅವರು ಪಕ್ಷದ ಪುನರ್‌ರಚನೆಗೆ ಒತ್ತಾಯಿಸಿದ್ದರು. ಉತ್ತರ ಪ್ರದೇಶದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರ ಕಾಲಾವಧಿ ಜುಲೈಗೆ ಕೊನೆಯಾಗಲಿದೆ. ಈ ವರ್ಷ ಐದು ಚುನಾವಣೆಗಳಲ್ಲಿ ಪಕ್ಷದ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ 'ಚಿಂತನ ಶಿಬರವನ್ನು' ಉದಯಪುರದಲ್ಲಿ ಇತ್ತೀಚೆಗಷ್ಟೇ ನಡೆಸಲಾಗಿತ್ತು.

ಈಗಾಗಲೇ ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುನಿಲ್‌ ಜಾಖಡ್‌ ಮೇ 14ರಂದು ಹಾಗೂ ಪಾಟೀದಾರ್‌ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್‌ ಪಟೇಲ್ ಗುಜರಾತ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮೇ 18ರಂದು ರಾಜೀನಾಮೆ ಸಲ್ಲಿಸಿದ್ದಾರೆ.

ADVERTISEMENT

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸಿಬಲ್‌ ನೀಡಿದ ಹೇಳಿಕೆ:

* 'ನಾನು ಕಾಂಗ್ರೆಸ್‌ ಮುಖಂಡನಾಗಿದ್ದೆ. ಕಾಂಗ್ರೆಸ್‌ಗೆ ಮೇ 16ರಂದು ರಾಜೀನಾಮೆ ಸಲ್ಲಿಸಿದ್ದೇನೆ. ಕಾಂಗ್ರೆಸ್‌ ಪಕ್ಷದ ಕುರಿತು ನಾನು ಏನನ್ನೂ ಹೇಳುವುದಿಲ್ಲ...ಯಾವುದೇ ಮಾತನ್ನು ಆಡುವುದೂ ನನಗೆ ಸರಿ ಕಾಣುತ್ತಿಲ್ಲ. 30–31 ವರ್ಷಗಳ ಸುದೀರ್ಘ ಸಂಬಂಧವನ್ನು ಕಳಚಿಕೊಳ್ಳುವುದು ಸುಲಭದ ಸಂಗತಿಯಲ್ಲ.'

* 'ನಾನೀಗ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ದೇಶದಲ್ಲಿ ಸದಾ ಸ್ವತಂತ್ರ ಅಭ್ಯರ್ಥಿಯಾಗಲು ಬಯಸುತ್ತೇನೆ...ಅದು ಮುಖ್ಯವೂ ಆಗಿದೆ. ವಿರೋಧ ಪಕ್ಷದಲ್ಲಿದ್ದಾಗ ನಾವು ಮೈತ್ರಿ ಮಾಡಿಕೊಳ್ಳುವ ಮೂಲಕ ಮೋದಿ ಸರ್ಕಾರವನ್ನು ವಿರೋಧಿಸುವ ಪ್ರಯತ್ನ ನಡೆಸಿದೆವು'

* 'ಪಕ್ಷದ ಸದಸ್ಯರಾಗಿ ನಾವು ಆ ಪಕ್ಷದ ಶಿಸ್ತಿಗೆ ಒಳಪಟ್ಟಿರುತ್ತೇವೆ. ಆದರೆ, ಸ್ವತಂತ್ರ ದನಿಯನ್ನು ಹೊಂದಿರುವುದು ಮುಖ್ಯವಾಗುತ್ತದೆ'

* 'ಅಖಿಲೇಶ್‌ ಯಾದವ್‌ ಅವರಿಗೆ ಆಭಾರಿಯಾಗಿದ್ದೇನೆ...ನಾವು, ಹಲವು ಜನರು 2024ರ ಚುನಾವಣೆಗಾಗಿ ಒಗ್ಗೂಡಿದ್ದೇವೆ. ಜನರ ಮುಂದೆ ನಮ್ಮ ಎಲ್ಲರ ಅಭಿಪ್ರಾಯಗಳನ್ನು ತೆರೆದಿಡಲಿದ್ದೇವೆ. ಕೇಂದ್ರ ಸರ್ಕಾರದ ದೋಷಗಳನ್ನು ಬಿಡಿಸಿಡಲಿದ್ದೇವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.