ADVERTISEMENT

ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತಿಗೆ ‘ಸುಪ್ರೀಂ’ ಹಸಿರು ನಿಶಾ‌ನೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 18:04 IST
Last Updated 20 ಮೇ 2022, 18:04 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಹೊರತೆಗೆಯಲಾದ ಕಬ್ಬಿಣದ ಅದಿರಿನ ರಫ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಅದಿರು ರಫ್ತಿಗೆ ಅವಕಾಶ ಕೋರಿ ಗಣಿ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು, ಅದಿರು ರಫ್ತಿಗೆ 11 ವರ್ಷಗಳ ನಂತರ ಹಸಿರು ನಿಶಾನೆ ನೀಡಿದೆ.

ಇ–ಹರಾಜು ಮೂಲಕ ಅದಿರು ಖರೀದಿಸುವುದಕ್ಕೆ ಸಾಕಷ್ಟು ಸಮಸ್ಯೆಗಳು ಇರುವುದರಿಂದ ಮಾರಾಟ ಪ್ರಕ್ರಿಯೆ ನೀರಸವಾಗಿತ್ತು ಎಂದು ಹೇಳಿರುವ ಪೀಠ, ಇ–ಹರಾಜಿನ ಮೂಲಕ ರಾಜ್ಯದಲ್ಲಿ ಅದಿರು ಮಾರಾಟಕ್ಕೆ ಇದ್ದ ಕೆಲವು ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.

ADVERTISEMENT

ಇದರಿಂದಾಗಿ ಉಕ್ಕು ಉತ್ಪಾದನಾ ಘಟಕಗಳು ಸ್ಥಳೀಯವಾಗಿ ಅದಿರು ಖರೀದಿಸಲು ಇದ್ದ ಕಠಿಣ ನಿಯಮಗಳಿಂದ ರಿಯಾಯಿತಿ ದೊರೆತಂತಾಗಿದೆ.

ರಾಜ್ಯದ ಗಣಿಗಳಿಂದ ಹೊರ ತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸೂಚಿಸಿತ್ತು.

ಇದಕ್ಕೆ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸರ್ಕಾರ, ಅದಿರು ರಫ್ತಿನ ವಿರುದ್ಧ ತನ್ನ ನಿಲುವು
ಸ್ಪಷ್ಟಪಡಿಸಿತ್ತು.

ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ರಫ್ತು ಮಾಡುವುದಕ್ಕೆ ಸುಪ್ರೀಂ ಕೋರ್ಟ್ 2011ರಿಂದ ನಿಷೇಧ ಹೇರಿತ್ತು.

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅದಿರು ರಫ್ತು ನಿಷೇಧಿಸಬೇಕು, ಅದಿರು ಮಾರಾಟದ ಮೇಲೂ ಕಠಿಣ ಕ್ರಮ ಜರುಗಿಸಿ ನಿಯಮಾವಳಿ ರೂಪಿಸಬೇಕು ಎಂದು ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.