ADVERTISEMENT

ಮಲಯಾಳ ಮಸೂದೆ ಬಗೆಗಿನ ಕಳವಳ ಆಧಾರರಹಿತ: ಸಿದ್ದರಾಮಯ್ಯ ಪತ್ರಕ್ಕೆ ಪಿಣರಾಯಿ

ಸಿ.ಎಂ. ಸಿದ್ದರಾಮಯ್ಯ ಅವರ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:56 IST
Last Updated 28 ಜನವರಿ 2026, 23:56 IST
ಪಿಣರಾಯಿ
ಪಿಣರಾಯಿ   

ತಿರುವನಂತಪುರ: ‘ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ವ್ಯಕ್ತಪಡಿಸುತ್ತಿರುವ ಕಳವಳವು ಆಧಾರ ರಹಿತವಾಗಿದೆ. ಅಲ್ಲದೇ, ಮಸೂದೆಯು ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳ ಹೇರಿಕೆಗೆ ಎಡೆಮಾಡುವುದಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. 

ಮಸೂದೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬರೆದಿದ್ದ ಪತ್ರಕ್ಕೆ ಪಿಣರಾಯಿ ಬುಧವಾರ ಪ್ರತ್ಯುತ್ತರ ನೀಡಿದ್ದಾರೆ. 

‘ಕೇರಳದ ಶಾಲೆಗಳಲ್ಲಿ ಭಾಷಾ ಅಲ್ಪಸಂಖ್ಯಾತರು ಮಲಯಾಳವನ್ನೇ ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕಲಿಯಬೇಕು ಎಂಬ ಹೇರಿಕೆ ಮಸೂದೆಯಲ್ಲಿಲ್ಲ. ಬದಲಿಗೆ ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃ ಭಾಷೆಯೊಂದಿಗೆ ಕೇರಳದ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನೂ ಅಧ್ಯಯನ ಮಾಡುವಂತಹ ಆಯ್ಕೆಯನ್ನಷ್ಟೇ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಹತ್ತನೇ ತರಗತಿ ಹಾಗೂ ಪ್ರೌಢ ಮಾಧ್ಯಮಿಕ ಶಿಕ್ಷಣದಲ್ಲಿ ಮಲಯಾಳ ಭಾಷಾ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ಕೇರಳದ ಸರ್ಕಾರಿ ಕಚೇರಿಗಳಲ್ಲಿ ಭಾಷಾ ಅಲ್ಪಸಂಖ್ಯಾತರು ಸಂವಹನಕ್ಕೆ ಹಾಗೂ ಉತ್ತರಗಳನ್ನು ಪಡೆಯಲು ಕನ್ನಡ ಮತ್ತು ತಮಿಳು ಭಾಷೆಗಳನ್ನು ಬಳಸಲು ಕೂಡ ಮಸೂದೆ ಅವಕಾಶ ನೀಡಿದೆ. ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಅಂಶವೂ ಮಸೂದೆಯಲ್ಲಿ ಇಲ್ಲ’ ಎಂದೂ ಪಿಣರಾಯಿ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.