ADVERTISEMENT

ರಾಣಾ ಸಂಗಾ ‘ದೇಶದ್ರೋಹಿ’ ಎಂದ SP ಸಂಸದನ ನಿವಾಸದ ಮೇಲೆ ಕರ್ಣಿ ಸೇನೆಯಿಂದ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2025, 10:35 IST
Last Updated 26 ಮಾರ್ಚ್ 2025, 10:35 IST
   

ಆಗ್ರಾ: ಸ್ಟ್ಯಾಂಡಪ್‌ ಕಾಮಿಡಿಯನ್‌ ಕುನಾಲ್ ಕಾಮ್ರಾ ಪ್ರಕರಣದ ಬೆನ್ನಲ್ಲೇ ಸಮಾಜವಾದಿ ರಾಜ್ಯಸಭಾ ಸದಸ್ಯ ರಾಮ್‌ಜಿ ಲಾಲ್‌ ಸುಮನ್‌ ಅವರ ಆಗ್ರಾ ನಿವಾಸದ ಮೇಲೆ ಬುಧವಾರ ಮಧ್ಯಾಹ್ನ ದಾಳಿ ನಡೆದಿದ್ದು, ಕರ್ಣಿ ಸೇನಾ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.

ಸುಮನ್‌ ಅವರು ಮೇವಾಡದ ಅರಸ ರಾಣಾ ಸಂಗಾ ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವುದಕ್ಕೆ ಕೆರಳಿದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್‌ 21ರಂದು ರಾಜ್ಯಸಭೆಯಲ್ಲಿ ಮಾತನಾಡಿದ್ದ ಸುಮನ್‌ ಅವರು ರಾಣಾ ಸಂಗಾ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು.

ADVERTISEMENT

‘ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಯಾರು? ಇಬ್ರಾಹಿಂ ಲೋಧಿಯನ್ನು ಸೋಲಿಸಲು ಬಾಬರ್‌ಗೆ ಆಹ್ವಾನ ನೀಡಿದ್ದು ರಾಣಾ ಸಂಗಾ. ಮುಸ್ಲಿಮರು ಬಾಬರ್‌ನ ಸಂತತಿ ಆದರೆ, ಹಿಂದೂಗಳು ದೇಶದ್ರೋಹಿ ರಾಣಾ ಸಂಗಾನ ವಂಶಸ್ಥರೇ? ನಾವು ಬಾಬರ್‌ನನ್ನು ಟೀಕಿಸುತ್ತೇವೆ. ಆದರೆ ರಾಣಾನನ್ನು ಟೀಕಿಸಲ್ಲ’ ಎಂದು ಸುಮನ್‌ ಹೇಳಿದ್ದರು.

ಇಂದು ಮಧ್ಯಾಹ್ನ ಬುಲ್ಡೋಜರ್‌ ಸಮೇತ ಸುಮನ್‌ ಅವರ ನಿವಾಸ ತಲುಪಿದ್ದ ಕಾರ್ಯಕರ್ತರು, ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಎಸೆದು ಹಾನಿ ಮಾಡಿದ್ದಾರೆ.

ಏನತ್ಮಧ್ಯೆ, ಸುಮನ್ ಅವರ ಮುಖಕ್ಕೆ ಮಸಿ ಬಳಿದು ಬೂಟಿನಲ್ಲಿ ಹೊಡೆದವರಿಗೆ ಬಹುಮಾನವಾಗಿ ₹5 ಲಕ್ಷ ನೀಡುವುದಾಗಿಯೂ ಸಂಘಟನೆಯ ರಾಜ್ಯ ಘಟಕ ಘೋಷಿಸಿದೆ.

ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕುನಾಲ್ ಕಾಮ್ರಾ ಕರೆದಿದ್ದರು. ಇದರಿಂದ ಕೆರಳಿದ್ದ ಶಿವಸೇನಾ ಕಾರ್ಯಕರ್ತರು ಭಾನುವಾರ ರಾತ್ರಿ ಕಾರ್ಯಕ್ರಮ ನಡೆದ ಖಾರ್‌ನಲ್ಲಿರುವ ಹ್ಯಾಬಿಟೇಟ್‌ ಕಾಮಿಡಿ ಕ್ಲಬ್ ಇರುವ ಹೋಟೆಲ್‌ ಅನ್ನು ಹಾನಿಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.