ಉತ್ತರ ಪ್ರದೇಶ: ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯರವರು ಬುಧವಾರ ಫತೇಪುರಕ್ಕೆ ತೆರಳುತ್ತಿದ್ದಾಗ ಕರ್ಣಿ ಸೇನಾ ಕಾರ್ಯಕರ್ತರೊಬ್ಬರು ಹಲ್ಲೆ ಮಾಡಿದ್ದಾರೆ.
ಸಾರಸ್ ಕ್ರಾಸಿಂಗ್‌ನಲ್ಲಿ ಲೋಕ ಮೋರ್ಚಾ ಮುಖ್ಯಸ್ಥರು ಹಾಗೂ ಸ್ಥಳೀಯ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮಯೊಂದರಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರ್ಯಕ್ರಮದಲ್ಲಿ ಪ್ರಸಾದ್ ಮೌರ್ಯರವರಿಗೆ ವ್ಯಕ್ತಿಯೊಬ್ಬರು ಹಾರ ಹಾಕುವಂತೆ ನಟಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ಣಿ ಸೇನಾ ಬೆಂಬಲಿಗರಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು, ‘‘ಕರ್ಣಿ ಸೇನೆಯಲ್ಲಿರುವ ಕೆಲ ಗೂಂಡಾಗಳು ಕಾನೂನು ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂದರು. ತಮ್ಮ ಕಣ್ಣೆದುರಲ್ಲೇ ಇಂತಹ ಘಟನೆಗಳು ಸಂಭವಿಸಿದರೂ ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಇಂಥಹ ಪ್ರಕರಣದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.
ಪೊಲೀಸರ ಸಮ್ಮುಖದಲ್ಲೇ ಇಂಥಹ ಘಟನೆಗಳು ಸಂಭವಿಸುತ್ತವೆ. ಇನ್ನು ಪೊಲೀಸ್ ಅಥವಾ ಭದ್ರತೆ ಇಲ್ಲದಿದ್ದರೇ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ‘‘ ಎಂದು ಕಾನೂನು ಸುವ್ಯವಸ್ಥೆ ವಿರುದ್ಧ ಅವರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.