ADVERTISEMENT

ಕರ್ತಾರ್‌ಪುರ ಕಾರಿಡಾರ್‌ ಸಭೆ ಮುಂದಕ್ಕೆ

ಭಾರತದ ನಡೆಗೆ ಪಾಕ್‌ ಅಸಮಾಧಾನ

ಪಿಟಿಐ
Published 29 ಮಾರ್ಚ್ 2019, 17:46 IST
Last Updated 29 ಮಾರ್ಚ್ 2019, 17:46 IST
   

ಇಸ್ಲಮಾಬಾದ್‌: ಕರ್ತಾರ್‌ಪುರ ಕಾರಿಡಾರ್‌ಗೆ ಸಂಬಂಧಿಸಿದಂತೆ ನಿಗದಿಯಾಗಿದ್ದ ಸಭೆಯ ದಿನಾಂಕ ಬದಲಾವಣೆಗೆ ಭಾರತ ಸೂಚಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನ, ಈ ವಿಷಯದಲ್ಲಿ ಭಾರತದ ನಡೆಯನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದೆ.

‘ಪಾಕಿಸ್ತಾನ ಇತ್ತೀಚೆಗೆ ನೇಮಕ ಮಾಡಿರುವ ಸಮಿತಿಯೊಂದರಲ್ಲಿ ಖಾಲಿಸ್ತಾನಿ ಪ್ರತ್ಯೇಕವಾದಿಗಳನ್ನು ಆಯ್ಕೆ ಮಾಡಿರುವುದಕ್ಕೆ’ ಭಾರತವು ದೆಹಲಿಯಲ್ಲಿರುವ ಪಾಕಿಸ್ತಾನದ ಹೈ ಕಮಿಷನರ್‌ ಅನ್ನು ಕರೆಸಿ ಆಕ್ಷೇಪಣೆ ದಾಖಲಿಸಿದೆ.

ಕರ್ತಾರ್‌ಪುರ ಕಾರಿಡಾರ್‌ ಸಂಚಾರಕ್ಕೆ ಮುಕ್ತವಾದ ನಂತರ, ಕರ್ತಾರ್‌ಪುರಕ್ಕೆ ಬರುವ ಸಿಖ್‌ ಯಾತ್ರಿಗಳಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಪಾಕಿಸ್ತಾನ ಸಂಪುಟ ಇತ್ತೀಚೆಗೆ ‘ಪಾಕಿಸ್ತಾನ್‌ ಸಿಖ್‌ ಗುರುದ್ವಾರ ಪ್ರಬಂಧಕ್‌ ಸಮಿತಿ’ (ಪಿಎಸ್‌ಜಿಪಿಸಿ) ರಚಿಸಿರುವ ವಿಷಯವನ್ನು ಪಾಕ್‌ ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿತ್ತು. ಆದರೆ ಸಮಿತಿಯ ಸದಸ್ಯರ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ADVERTISEMENT

ಕರ್ತಾರ್‌ಪುರ ಕಾರಿಡಾರ್‌ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ತಜ್ಞರ ಸಭೆಯನ್ನು ವಾಘಾದಲ್ಲಿ ಏಪ್ರಿಲ್‌ 2ರಂದು ನಡೆಸಲು ನಿರ್ಧರಿಸಲಾಗಿತ್ತು. ಮಾರ್ಚ್‌ 14ರಂದು ನಡೆದಿದ್ದ ಸಭೆಯಲ್ಲಿ ಇದಕ್ಕೆ ಎರಡೂ ದೇಶಗಳ ಅಧಿಕಾರಿಗಳು ಸಮ್ಮತಿಸಿದ್ದರು.

ಕೊನೆಗಳಿಗೆಯಲ್ಲಿ ಭಾರತ ಸಭೆಯನ್ನು ಮುಂದೂಡಿರುವುದಕ್ಕೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಪಾಕಿಸ್ತಾನದ ಅಭಿಪ್ರಾಯ ಕೇಳದೆ ಏಕ ಪಕ್ಷೀಯವಾಗಿ ಭಾರತವು ನಿಗದಿತ ಸಭೆಯನ್ನು ಮುಂದೂಡಿರುವುದು ಸರಿಯಲ್ಲ. ಭಾರತದ ಈ ನಡೆಯನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಪಾಕಿಸ್ತಾನದೊಂದಿಗೆ ಸಮಾಲೋಚಿಸಿ ಮುಂದಿನ ಸಭೆಯ ದಿನಾಂಕ ನಿಗದಿ ಮಾಡಲಾಗುವುದು. ಆ ಸಭೆಯಲ್ಲಿ ಕಾರಿಡಾರ್‌ನ ಮಾದರಿಗಳ ಕುರಿತು ಚರ್ಚಿಸಲಾಗುವುದು’ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸಿಖ್‌ರ ಪರಮೋಚ್ಛ ಗುರು ನಾನಕ್‌ ಅವರು ಮೊದಲ ಗುರುದ್ವಾರವನ್ನು ಕರ್ತಾರ್‌ಪುರದಲ್ಲಿ ಸ್ಥಾಪಿಸಿದರು. ಅವರು ಐಕ್ಯವಾದದ್ದೂ ಇದೇ ಸ್ಥಳದಲ್ಲಿ. ಈ ಐತಿಹಾಸಿಕ ಸಿಖ್ ಮಂದಿರಕ್ಕೆ ಭಾರತದ ಯಾತ್ರಿಕರು ಭೇಟಿ ನೀಡುವುದಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲು ಕರ್ತಾರ್‌ಪುರ ಕಾರಿಡಾರ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಳೆದ ವರ್ಷ ನವೆಂಬರ್‌ 25ರಂದು ಈ ಸಂಬಂಧ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಗುರುದ್ವಾರ ಜಿಲ್ಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.