ADVERTISEMENT

ವೀಸಾ ಹಗರಣ: ಜಾರಿ ನಿರ್ದೇಶನಾಲಯದ ಎದುರು ಹಾಜರಾದ ಕಾರ್ತಿ ಚಿದಂಬರಂ

ಪಿಟಿಐ
Published 2 ಜನವರಿ 2024, 7:52 IST
Last Updated 2 ಜನವರಿ 2024, 7:52 IST
ಕಾರ್ತಿ ಚಿದಂಬರಂ 
ಕಾರ್ತಿ ಚಿದಂಬರಂ    

ನವದೆಹಲಿ: ಚೀನಾದ ಪ್ರಜೆಗಳಿಗೆ ವೀಸಾ ಕೊಡಿಸಿದ್ದ ಪ್ರಕರಣದಲ್ಲಿನ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರು ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಡಿಸೆಂಬರ್ 23ರಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಕಾರ್ತಿ ಅವರ ಹೇಳಿಕೆಗಳನ್ನು ಇ.ಡಿ ದಾಖಲಿಸಿಕೊಂಡಿತ್ತು.

ವಿಚಾರಣೆಗೆ ಹಾಜರಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದೊಂದು ಮಾಮೂಲಿ ವಿಷಯ. ಚುನಾವಣೆಗಳು ಹತ್ತಿರ ಬಂದಾಗ ಇಂತವೆಲ್ಲ ಸಾಮಾನ್ಯ. ಇವೆಲ್ಲವೂ ನಿರರ್ಥಕ’ ಎಂದರು.

ADVERTISEMENT

ಕಾರ್ತಿ ಅವರು ತಮ್ಮ ತಂದೆ ಪಿ.ಚಿದಂಬರಂ ಗೃಹ ಸಚಿವರಾಗಿದ್ದ ಅವಧಿಯಲ್ಲಿ (2011) ಚೀನಾದ 263 ಪ್ರಜೆಗಳಿಗೆ ವೀಸಾ ನೀಡಲು ಕಿಕ್‌ಬ್ಯಾಕ್‌ ರೂಪದಲ್ಲಿ ₹50 ಲಕ್ಷ ಪಡೆದಿದ್ದರು ಎಂಬ ಆರೋಪವಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ತಿ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಪ್ರಕರಣ ದಾಖಲಿಸಿದೆ.

ಕಾರ್ತಿ ಅವರೊಂದಿಗೆ ವೇದಾಂತ ಸಮೂಹದ ಹಿರಿಯ ಅಧಿಕಾರಿ ಎಸ್. ಭಾಸ್ಕರರಾಮನ್ ಅವರಿಗೂ ಈ ಹಣ ಸಂದಾಯವಾಗಿದೆ ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.