ADVERTISEMENT

ಕರೂರು ಕಾಲ್ತುಳಿತ: ಆಯೋಗ ರದ್ದತಿ ಆದೇಶ ಮಾರ್ಪಾಡಿಗೆ ನಿರಾಕರಣೆ

ತಮಿಳುನಾಡು ಸರ್ಕಾರದ ಅರ್ಜಿಯನ್ನು ನಿರಾಕರಿಸಿದ ಸುಪ್ರೀ ಕೋರ್ಟ್‌

ಪಿಟಿಐ
Published 12 ಡಿಸೆಂಬರ್ 2025, 14:40 IST
Last Updated 12 ಡಿಸೆಂಬರ್ 2025, 14:40 IST
..
..   

ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಮತ್ತು ಏಕಸದಸ್ಯ ಆಯೋಗವನ್ನು ರದ್ದುಗೊಳಿಸಿರುವ ಆದೇಶವನ್ನು ಮಾರ್ಪಾಡುಗೊಳಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ. 

‘ಎಲ್ಲವೂ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕೆಂದು ನಾವು ಬಯಸುತ್ತೇವೆ’ ಎಂದು ನ್ಯಾಯಾಮೂರ್ತಿಗಳಾದ ಜೆ.ಕೆ ಮಾಹೇಶ್ವರಿ ಮತ್ತು ವಿಜಯ್‌ ಬಿಷ್ಣೋಯಿ ಅವರ ಪೀಠವು ತಿಳಿಸಿತು. 

‌ಮದ್ರಾಸ್‌ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್ ನೀಡಿರುವ ವರದಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಹೈಕೋರ್ಟ್‌ನಲ್ಲಿ ಏನೋ ತಪ್ಪು ನಡೆಯುತ್ತಿದೆ. ಇದು ಸರಿಯಲ್ಲ’ ಎಂದು ಹೇಳಿದರು. 

ADVERTISEMENT

ನಟ, ಟಿವಿಕೆ ಮುಖ್ಯಸ್ಥ ವಿಜಯ್‌ ಅವರು ಕರೂರಿನಲ್ಲಿನ ನಡೆಸಿದ್ದ ರ‍್ಯಾಲಿಯ ವೇಳೆ ಕಾಲ್ತುಳಿತ ಸಂಭವಿಸಿ 41 ಜನ ಮೃತಪಟ್ಟಿದ್ದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 13ರಂದು ಆದೇಶಿಸಿತ್ತು. 

ಸ್ವತಂತ್ರ ತನಿಖೆಗೆ ಕೋರಿ ಟಿವಿಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರ ನೇತೃತ್ವದಲ್ಲಿ ಮೂವರು ಸದಸ್ಯರಿರುವ ಆಯೋಗವನ್ನು ರಚಿಸಿತ್ತು ಹಾಗೂ ಎಸ್‌ಐಟಿ ಮತ್ತು ಏಕಸದಸ್ಯ ಆಯೋಗವನ್ನು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.