ತಮಿಳ್ ಇಸೈ ಸೌಂದರ್ಯರಾಜನ್
ಚೆನ್ನೈ: ‘ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ವಿಜಯ್ ಅವರನ್ನು ಡಿಎಂಕೆ ‘ಟಾರ್ಗೆಟ್’ ಮಾಡುತ್ತಿದೆ, ಉಳಿದ ವಿರೋಧ ಪಕ್ಷಗಳನ್ನೂ ಗುರಿಯಾಗಿಸಿದೆ ಎಂದು ತಮಿಳುನಾಡು ಬಿಜೆಪಿ ನಾಯಕಿ ತಮಿಳ್ ಇಸೈ ಸೌಂದರರಾಜನ್ ಅವರು ಹೇಳಿದ್ದಾರೆ.
ಇದಕ್ಕಾಗಿಯೇ ನಾವು ವಿಜಯ್ ಅವರ ಬೆನ್ನಿಗೆ ನಿಂತಿದ್ದೇವೆ ಹೊರತು, ವಿಜಯ್ ಅವರ ಜೊತೆ ಯಾವುದೇ ರಾಜಕೀಯ ಮೈತ್ರಿ ಇಲ್ಲ ಎಂದು ಅವರು ಇಂದು ಚೆನ್ನೈನಲ್ಲಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷದವರಿಗೆ ಹಾಗೂ ತಮಗೆ ಬೇಕಾದವರಿಗೆ ಮಾತ್ರ ಸಮಾವೇಶ ನಡೆಸಲು ಡಿಎಂಕೆ ಸರ್ಕಾರ ಅನುಮತಿ ನೀಡುತ್ತದೆ. ಆರ್‌ಎಸ್‌ಎಸ್ ಸಮಾವೇಶಕ್ಕೆ ಅನುಮತಿ ನೀಡುವುದಿಲ್ಲ. ಹೈಕೋರ್ಟ್‌ನಿಂದಲೇ ಪಡೆಯಬೇಕು ಎಂದು ತಮಿಳ್ ಇಸೈ ಸೌಂದರರಾಜನ್ ಬೇಸರ ವ್ಯಕ್ತಪಡಿಸಿದರು.
ಕರೂರು ಕಾಲ್ತುಳಿದ ದುರಂತದ ಹೊಣೆಯನ್ನು ಡಿಎಂಕೆ ಸರ್ಕಾರವೇ ಹೊರಬೇಕು ಎಂದು ಅವರು ಹೇಳಿದರು.
ಇನ್ನು ನಿನ್ನೆ ಸಿಎಂ ಎಂಕೆ ಸ್ಟಾಲಿನ್ ಅವರು, ದುರಂತಕ್ಕೆ ವಿಜಯ್ ಅವರೇ ಹೊಣೆ ಎಂದು ಪರೋಕ್ಷವಾಗಿ ಆರೋಪಿಸಿದ್ದರು. ‘ಪಕ್ಷವು ಘೋಷಿಸಿದ ಪ್ರಕಾರ, ‘ಪಕ್ಷದ ನಾಯಕ’ ಮಧ್ಯಾಹ್ನ 12ಕ್ಕೆ ವೇದಿಕೆಗೆ ಬರಬೇಕಿತ್ತು. ಆದರೆ, ಏಳು ಗಂಟೆಯಷ್ಟು ತಡವಾಗಿ, ರಾತ್ರಿ 7ಕ್ಕೆ ವೇದಿಕೆಗೆ ಬಂದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತಲ್ಲದೇ, 41 ಜನರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದ್ದರು.
ಸೆ. 27 ರಂದು ಕರೂರಿನಲ್ಲಿ ವಿಜಯ್ ಅವರ ಸಮಾವೇಶದಲ್ಲಿ ಕಾಲ್ತುಳಿತ ಉಂಟಾಗಿ 41 ಜನ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.