ADVERTISEMENT

ಕಾಶ್ಮೀರ ಚುನಾವಣೆ: ಗುಪ್ಕಾರ್‌ಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 19:40 IST
Last Updated 22 ಡಿಸೆಂಬರ್ 2020, 19:40 IST
ಶ್ರೀನಗರದಲ್ಲಿ ಗೆಲುವಿನ ಬಳಿಕ, ಬಿಜೆಪಿ ಅಭ್ಯರ್ಥಿ ಎಜಾಜ್‌ ಹುಸೇನ್‌ ಅವರ ಸಂಭ್ರಮ ಪಿಟಿಐ ಚಿತ್ರ
ಶ್ರೀನಗರದಲ್ಲಿ ಗೆಲುವಿನ ಬಳಿಕ, ಬಿಜೆಪಿ ಅಭ್ಯರ್ಥಿ ಎಜಾಜ್‌ ಹುಸೇನ್‌ ಅವರ ಸಂಭ್ರಮ ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ (ಡಿಡಿಸಿ) ಚುನಾವಣೆಯಲ್ಲಿ ಫಾರೂಕ್‌ ಅಬ್ದುಲ್ಲಾ ನೇತೃತ್ವದ ‘ಗುಪ್ಕಾರ್‌ ಘೋಷಣೆಗಾಗಿ ಜನರ ಮೈತ್ರಿಕೂಟ’ವು (ಪಿಎಜಿಡಿ) ಮುನ್ನಡೆ ಸಾಧಿಸಿದೆ.

ಇತ್ತೀಚಿನ ವರದಿಗಳು ಬಂದಾಗ, ಪಿಎಜಿಡಿ 96 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿತ್ತು. ಬಿಜೆಪಿ 56 ಮತ್ತು ಕಾಂಗ್ರೆಸ್‌ 22 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಪಕ್ಷೇತರ ಅಭ್ಯರ್ಥಿಗಳು 55 ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಜಮ್ಮು ವಿಭಾಗದಲ್ಲಿ ಬಿಜೆಪಿ 44 ಕ್ಷೇತ್ರಗಳಲ್ಲಿ ಮುಂದಿದೆ. ಪಿಎಜಿಡಿ ಇಲ್ಲಿ 20 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.

ನವೆಂಬರ್‌ 28ರಿಂದ ಡಿಸೆಂಬರ್‌ 19ರ ಅವಧಿಯಲ್ಲಿ 20 ಜಿಲ್ಲೆಗಳ ತಲಾ 14 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ಆಗಿತ್ತು. ಮಂಗಳವಾರ ಬೆಳಿಗ್ಗೆಯೇ ಮತ ಎಣಿಕೆ ಆರಂಭವಾಗಿದೆ. ಒಟ್ಟು 280 ಕ್ಷೇತ್ರಗಳಿವೆ. ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಲಾಗಿತ್ತು. ಹಾಗಾಗಿ, ಮತ ಎಣಿಕೆಗೆ ಹೆಚ್ಚು ಸಮಯ ಬೇಕಾಗಿದೆ.

ADVERTISEMENT

ಬದ್ಧ ಪ್ರತಿಸ್ಪರ್ಧಿಗಳಾಗಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪಿಡಿಪಿ ಮತ್ತು ಇತರ ಐದು ಪಕ್ಷಗಳು ಅಕ್ಟೋಬರ್‌ 5ರಂದು ಪಿಜಿಎಡಿ ರೂಪಿಸಿಕೊಂಡಿವೆ. ಕಾಂಗ್ರೆಸ್‌ ಕೂಡ ಈ ಗುಂಪಿನಲ್ಲಿ ಆರಂಭದಲ್ಲಿ ಇತ್ತು. ಆದರೆ, ‘ಗುಪ್ಕಾರ್‌ ಗ್ಯಾಂಗ್‌ ದೇಶವಿರೋಧಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಲು ಆರಂಭಿಸಿದ್ದರಿಂದ ಕಾಂಗ್ರೆಸ್‌ ದೂರ ಸರಿಯಿತು.

ಕಣಿವೆಯಲ್ಲಿ ಖಾತೆ ತೆರೆದ ಬಿಜೆಪಿ
ಕಾಶ್ಮೀರ ಕಣಿವೆಯಲ್ಲಿ ಬಿಜೆಪಿ ಇದೇ ಮೊದಲಿಗೆ ಖಾತೆ ತೆರೆದಿದೆ. ಜಿಲ್ಲಾ ಅಭಿವೃದ್ಧಿ ಸಮಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಯಲ್ಲಿ ನೆಲೆ ಕಂಡುಕೊಳ್ಳಲು 2014ರ ವಿಧಾನಸಭೆ ಚುನಾವಣೆಯ ನಂತರದಿಂದಲೇ ಬಿಜೆಪಿ ಯತ್ನಿಸುತ್ತಿದೆ. ಆದರೆ, ಯಾವುದೇ ಚುನಾವಣೆಯಲ್ಲಿ ಗೆಲುವು ಪಡೆಯಲು ಈವರೆಗೆ ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.