ADVERTISEMENT

‘ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿಲ್ಲ’

ಯಶವಂತ ಸಿನ್ಹಾ ಅಭಿಮತ

ಪಿಟಿಐ
Published 25 ನವೆಂಬರ್ 2019, 19:00 IST
Last Updated 25 ನವೆಂಬರ್ 2019, 19:00 IST
ಯಶವಂತ ಸಿನ್ಹಾ
ಯಶವಂತ ಸಿನ್ಹಾ   

ಶ್ರೀನಗರ : ‘ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾ ಹೇಳಿದರು.

ನಾಲ್ಕು ದಿನಗಳ ಕಾಶ್ಮೀರ ಭೇಟಿ ನಂತರ ಮಾತನಾಡಿದ ಅವರು, ‘370ನೇ ವಿಧಿ ರದ್ದತಿಯು ಕಾಶ್ಮೀರವನ್ನು ಸ್ತಬ್ಧಗೊಳಿಸಿತ್ತು. ಈಗ ಈ ಸ್ತಬ್ಧತೆಯ ಜಾಗವನ್ನು ಭಯ ಆವರಿಸಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಐವರು ಸದಸ್ಯರಿದ್ದ ನಾಗರಿಕರ ನಿಯೋಗದ ನೇತೃತ್ವ ವಹಿಸಿದ್ದ ಸಿನ್ಹಾ ಅವರು, ‘ಪೊಲೀಸರ ಮೂಲಕ ಕಾಶ್ಮೀರದ ಜನರ ಧ್ವನಿಯನ್ನು ಅಡಗಿಸುವ ಉದ್ದೇಶಪೂರ್ವಕ ತಂತ್ರವನ್ನು ಕೇಂದ್ರ ಹೆಣೆಯುತ್ತಿದೆ. ಕೇಂದ್ರವು ಕಾಶ್ಮೀರದ ಕುರಿತು ತನ್ನ ಧೋರಣೆ ಬದಲಿಸಿಕೊಳ್ಳದ್ದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ’ ಎಂದು ಎಚ್ಚರಿಸಿದರು.

ADVERTISEMENT

‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ಲಡಾಖ್‌ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡನೆ ಮಾಡಿರುವುದು ಕಾಶ್ಮೀರದಲ್ಲಿ ‘ದೊಡ್ಡ ಮಾನಸಿಕ ಸಮಸ್ಯೆ’ಗೆ ಕಾರಣವಾಗಿದೆ’ ಎಂದರು.

ಫಾರುಕ್‌ ಅಬ್ದುಲ್ಲಾ ಅವರ ಗೃಹಬಂಧನದ ಕುರಿತು ಮಾತನಾಡಿ, ‘ನಾಯಕರ ಬಂಧನವು ಸಮಾಜದಲ್ಲಿ ದೊಡ್ಡ ಮಟ್ಟದ ಖಾಲಿತನವನ್ನು ತಂದೊಡ್ಡಿದೆ. ಜನರು ತಮ್ಮ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಭಯೋತ್ಪಾದಕರ ದಾಳಿಯ ಬೆದರಿಕೆ ಇದೆ. ಆದ್ದರಿಂದ ಶ್ರೀನಗರದಿಂದ ಹೊರಗಡೆ ಎಲ್ಲೂ ಹೋಗದಂತೆ ಪೊಲೀಸರು ನಮಗೆ ಹೇಳಿದ್ದರು. ಆದರೆ, 370ನೇ ವಿಧಿಯೇ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಲು ಕಾರಣ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಈಗ 370 ವಿಧಿಯನ್ನು ರದ್ದು ಮಾಡಿ ನಾಲ್ಕು ತಿಂಗಳು ಕಳೆದರೂ, ಭಯೋತ್ಪಾದಕ ದಾಳಿಯ ಬೆದರಿಕೆ ಇದೆ ಎಂದು ಜನರಿಗೆ ಹೇಳಲಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಹಾಗಿದ್ದರೂ, ನಮ್ಮ ಕಾಶ್ಮೀರ ಭೇಟಿ ಫಲಪ್ರದವಾಗಿದೆ. ಅಲ್ಲಿನ ಪಂಚಾಯಿತಿ ಪ್ರತಿನಿಧಿಗಳು, ವಕೀಲರ ಸಂಘ, ರೈತರು, ಯುವಕರನ್ನು ನಾವು ಭೇಟಿ ಮಾಡಿ, ಅವರ ಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದ್ದೇವೆ’ ಎಂದರು.

ನಿಯೋಗವು ಸೋಮವಾರ ಮಧ್ಯಾಹ್ನ ದೆಹಲಿಯಿಂದ ಕಾಶ್ಮೀರಕ್ಕೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.