
ಶ್ರೀನಗರ: ಮಸೀದಿ, ಮದರಸಗಳು ಹಾಗೂ ಅವುಗಳ ಮೇಲ್ವಿಚಾರಕರ ಮಾಹಿತಿಗಳನ್ನು ಸಂಗ್ರಹಿಸಿ ದಾಖಲೆಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಆಡಳಿತಾಧಿಕಾರಿಗಳು ಕಾಶ್ಮೀರದಲ್ಲಿ ಆರಂಭಿಸಿದ್ದಾರೆ.
‘ವೈಟ್ ಕಾಲರ್’ ಭಯೋತ್ಪಾದಕ ಜಾಲವನ್ನು ಭೇದಿಸುವ ವೇಳೆ ಮದರಸ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಶಂಕಿತರು ತೀವ್ರಗಾಮಿಗಳಾಗಿ ಬದಲಾಗಿರುವುದು ತಿಳಿದುಬಂದಿತ್ತು. ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಸೀದಿ, ಮದರಸಗಳ ಇಮಾಮ್‌ಗಳು, ಶಿಕ್ಷಕರು ಹಾಗೂ ನಿರ್ವಹಣಾ ಸಮಿತಿಯ ಸದಸ್ಯರ ಮಾಹಿತಿಗಳನ್ನು ಸಂಗ್ರಹಿಸಿ ದಾಖಲೆ ರೂಪಿಸುವ ಜವಾಬ್ದಾರಿಯನ್ನು ಕಂದಾಯ ಇಲಾಖೆಯ ಗ್ರಾಮಗಳ ಹಂತದ ಅಧಿಕಾರಿಗಳಿಗೆ ವಹಿಸಲಾಗಿದೆ.
ಮಸೀದಿ–ಮದರಸದ ಹಣಕಾಸು ವ್ಯವಹಾರ, ಅವುಗಳ ನಿರ್ಮಾಣ ಹಾಗೂ ಸಭೆಗಳಿಗಾಗಿ ಬಳಸುವ ನಿಧಿಯ ಮೂಲ, ದಿನಂಪ್ರತಿಯ ವೆಚ್ಚದ ಕುರಿತ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಲಿದ್ದಾರೆ ಎಂದೂ ತಿಳಿಸಿದ್ದಾರೆ.
ಸಾಮಾನ್ಯ ಮಾಹಿತಿಯ ಹೊರತಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆಸ್ತಿ ವಿವರ, ಸಾಮಾಜಿಕ ಜಾಲತಾಣಗಳ ಖಾತೆಗಳು, ಪಾಸ್‌ಪೋರ್ಟ್, ಎಟಿಎಂ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್‌ಗಳ ಐಎಂಇಐ ನಂಬರ್ ಹಾಗೂ ಮಾಡಲ್‌ಗಳ ಬಗ್ಗೆಯೂ ಮದರಸಗಳ ಶಿಕ್ಷಕರು ಮತ್ತು ಇಮಾಮ್‌ಗಳು ಮಾಹಿತಿ ನೀಡಬೇಕಾಗಬಹುದು ಎನ್ನಲಾಗಿದೆ.
ಇದಲ್ಲದೇ, ಕಾಶ್ಮೀರದಲ್ಲಿ ಹೆಚ್ಚಾಗಿ ಅನುಸರಿಸುವ ಸೂಫಿ ಪಂಥವನ್ನು ಬದಿಗೆ ಸರಿಸುವ ಮುಸ್ಲಿಂ ಮೂಲಭೂತ ಪಂಗಡಗಳು ಉದಯಿಸುತ್ತಿರುವುದರಿಂದ ಕಣಿವೆಯಲ್ಲಿ ಯುವಜನರು ತೀವ್ರಗಾಮಿಗಳಾಗುತ್ತಿದ್ದಾರೆ ಎನ್ನುವ ಅಂಶವನ್ನೂ ಗಣನೆಗೆ ತೆಗದುಕೊಳ್ಳಲಾಗಿದೆ.
ಹೀಗಾಗಿ ಮಸೀದಿ ಅಥವಾ ಮದರಸಗಳು ಅನುಸರಿಸುತ್ತಿರುವ ಮುಸ್ಲಿಂ ಪಂಗಡಗಳು ಯಾವುದು ಎಂಬುದನ್ನೂ ಪ್ರಶ್ನಿಸಿ, ಮಾಹಿತಿ ದಾಖಲಿಸಲಾಗುತ್ತದೆ ಎಂದೂ ಅಧಿಕಾರಿ ಹೇಳಿದ್ದಾರೆ.
ಇಮಾಮ್‌ಗಳು ಮತ್ತು ಶಿಕ್ಷಕರು ಈ ಹಿಂದೆ ಯಾವುದಾದರೂ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ? ನ್ಯಾಯಾಲಯಗಳಲ್ಲಿ ಯಾವುದಾದರೂ ಪ್ರಕರಣ ಬಾಕಿ ಇದೆಯೇ? ಶಿಕ್ಷೆಗೆ ಒಳಪಟ್ಟಿದ್ದರೆ? ಎನ್ನುವಂಥ ವಿವರಗಳನ್ನೂ ಕೇಳಲಾಗುತ್ತದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.