
ಶ್ರೀನಗರ: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವವರ ಜಾಲವನ್ನು ಭೇದಿಸಲು ಮುಂದಾಗಿರುವ ಜಮ್ಮು–ಕಾಶ್ಮೀರ ಪೊಲೀಸರು ಕಣಿವೆ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ 1500 ಜನರನ್ನು ವಶಕ್ಕೆ ಪಡೆದಿದ್ದಾರೆ.
‘ಗಡಿಯಾಚೆಯಿಂದ ಭಯೋತ್ಪಾದನೆ ಕೃತ್ಯ ನಡೆಸುತ್ತಿರುವ ಶಂಕಿತ ಬಂಡುಕೋರರ ಕುಟುಂಬಸ್ಥರು, ಭೂಗತ ಚಟುವಟಿಕೆ ನಡೆಸುತ್ತಿರುವವರು ಸೇರಿದಂತೆ 1500 ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವ್ಯವಸ್ಥೆಗೆ ಬೆಂಬಲ ನೀಡುತ್ತಿರುವ ಶಂಕಿತ ವ್ಯಕ್ತಿಗಳನ್ನು ತಟಸ್ಥಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಶಾಂತಿಭಂಗಗೊಳಿಸಲು ಭಯೋತ್ಪಾದಕರು ಯತ್ನಿಸುತ್ತಿದ್ದಾರೆ ಎಂದು ನಂಬಲರ್ಹ ಗುಪ್ತಚರ ಮೂಲಗಳು ನೀಡಿದ ಮಾಹಿತಿಯ ಆಧಾರದಲ್ಲಿ ಶ್ರೀನಗರ, ಪುಲ್ವಾಮ, ಶೋಫಿಯಾ, ಕುಲ್ಗಾಂ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಪರಿಶೀಲನೆಯ ಬಳಿಕ ಹಲವರನ್ನು ಬಿಡುಗಡೆ ಮಾಡಲಾಗುವುದು, ಉಳಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮ ಕೆಲಸಗಳಲ್ಲಿದ್ದು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ನೀಡುತ್ತಿರುವವರನ್ನು ನಿಗ್ರಹಿಸುವ ಕಾರ್ಯವನ್ನು ಭದ್ರತಾಪಡೆಗಳು ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.