ADVERTISEMENT

ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ: ಗಸ್ತು ಹೆಚ್ಚಿಸಿದ ಸೇನಾಪಡೆ

ಪಿಟಿಐ
Published 10 ಜನವರಿ 2026, 15:59 IST
Last Updated 10 ಜನವರಿ 2026, 15:59 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದ ಭದ್ರೆವಾಹದ ಪ್ರವಾಸಿತಾಣಗಳಲ್ಲಿ ರಾಜ್ಯ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡದ ಸದಸ್ಯರು ಶನಿವಾರ ಗಸ್ತು ತಿರುಗಿದರು–ಪಿಟಿಐ ಚಿತ್ರ</p></div>

ಜಮ್ಮು ಮತ್ತು ಕಾಶ್ಮೀರದ ಭದ್ರೆವಾಹದ ಪ್ರವಾಸಿತಾಣಗಳಲ್ಲಿ ರಾಜ್ಯ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡದ ಸದಸ್ಯರು ಶನಿವಾರ ಗಸ್ತು ತಿರುಗಿದರು–ಪಿಟಿಐ ಚಿತ್ರ

   

–ಪಿಟಿಐ ಚಿತ್ರ

ಭದ್ರೆವಾಹ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಹಿಮಚ್ಛಾದಿತ ಪ್ರವಾಸಿ ತಾಣಗಳಲ್ಲಿ ಕಳೆದ ಹದಿನೈದು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯು ತೀವ್ರ ಏರುಗತಿಯಲ್ಲಿ ಸಾಗಿದೆ. ಇದರ ಬೆನ್ನಲ್ಲೇ, ಭದ್ರತೆಯನ್ನು ಹೆಚ್ಚಿಸಲು ಸೇನಾ ಪಡೆ ಕ್ರಮ ಕೈಗೊಂಡಿದೆ.

ADVERTISEMENT

‘ಎತ್ತರದ ಹುಲ್ಲುಗಾವಲು ಪ್ರದೇಶಗಳಾದ ಛತ್ತರ್‌ಗಲ್ಲಾ (11 ಸಾವಿರ ಅಡಿ), ಪಂಜ್‌ ನಲ್ಲಾ (10,200 ಅಡಿ) ಹಾಗೂ ಗುಲ್ದಾಂಡಾ (9,555 ಅಡಿ) ಸೇರಿದಂತೆ ಭದ್ರೆವಾಹ– ಪಠಾಣ್‌ಕೋಣ್‌ ಹೆದ್ದಾರಿಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಠಿಣ ಹವಾಮಾನದ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡ (ಎಸ್‌ಒಗಿ), ಅರೆ ಸೇನಾ ಪಡೆಗಳ ಯೋಧರು ಹೆದ್ದಾರಿ ಹಾಗೂ ಪ್ರವಾಸಿ ತಾಣಗಳಲ್ಲಿ ಪಹರೆ ಕಾಯುತ್ತಿದ್ದಾರೆ. ಸ್ಥಳೀಯ ಆತಿಥ್ಯ ತಂಡಗಳು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.

‘ಭದ್ರೆವಾಹ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳವಾಗಿದ್ದು, ಗರಿಷ್ಠ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ನಿರಂತರ ಹಿಮಚ್ಛಾದಿತ ಹಾಗೂ ಕಡಿದಾದ ಪರ್ವತಗಳಿರುವ ಕಾರಣ, ಈ ಪ್ರದೇಶಗಳಲ್ಲಿ ಭದ್ರತೆ ಒದಗಿಸುವುದು ಕೂಡ ಸವಾಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನೋದ್‌ ಶರ್ಮಾ ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಹಿಮಪಾತದ ಸಂದರ್ಭದಲ್ಲಿ ಅತ್ಯಂತ ಕಡಿದಾದ ಪ‍ರ್ವತಗಳಲ್ಲಿ ಮಾತ್ರ ಭದ್ರತೆ ಒದಗಿಸಲಾಗುತ್ತಿತ್ತು. ಈ ಬಾರಿ ಪ್ರವಾಸಿತಾಣಗಳಲ್ಲಿಯೂ ಪೊಲೀಸರನ್ನು ನಿಯೋಜಿಸಿರುವುದು ಪ್ರವಾಸಿಗರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿದೆ’ ಎಂದು ಸ್ಥಳೀಯ ನಿವಾಸಿ ರಶೀದ್‌ ಚೌಧರಿ ತಿಳಿಸಿದ್ದಾರೆ. 

ಕಳೆದ ವರ್ಷ ಏ‍ಪ್ರಿಲ್‌ 22ರಂದು ಪಹಲ್ಗಾಮ್‌ನ ಸುಂದರ ಬೈಸರನ್‌ ಕಣಿವೆಯಲ್ಲಿ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮೂವರು ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮೃತಪಟ್ಟಿದ್ದರು.

ಶೋಪಿಯಾನ್‌ನಲ್ಲಿ ಮೈನಸ್‌ 8.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ತಾಪಮಾನ ತೀವ್ರವಾಗಿ ಇಳಿಕೆಯಾಗಿದ್ದು ಶೋಪಿಯಾನ್‌ನಲ್ಲಿ ಶನಿವಾರ ಮೈನಸ್ 8.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ದಾಲ್‌ ಸರೋವರ ಹಾಗೂ ಇತರೆ ಜಲಮೂಲಗಳಲ್ಲಿ ನೀರು ಹೆಪ್ಪುಗಟ್ಟಿದೆ. 

‘ಶ್ರೀನಗರದಲ್ಲಿ ಶುಕ್ರವಾರ ರಾತ್ರಿ ಮೈನಸ್‌ 5.7 ಡಿಗ್ರಿ ತಾಪಮಾನ ದಾಖಲಾಗಿದ್ದು ಗುರುವಾರ ರಾತ್ರಿ ಮೈನಸ್‌ 6 ಡಿಗ್ರಿ ದಾಖಲಾಗಿತ್ತು. ಈ ಋತುವಿನಲ್ಲಿ ಕಣಿವೆಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಈ ಋತುವಿನಲ್ಲಿ ಇಡೀ ಪ್ರದೇಶದಲ್ಲಿ ಮೂಳೆ ಕೊರೆಯುವಷ್ಟು ತಂಪಾದ ತಾಪಮಾನವಿರುತ್ತದೆ. ಕಣಿವೆ ಪ್ರದೇಶದ ಕೆಲವೆಡೆಗಳಲ್ಲಿ –3.8 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ದಕ್ಷಿಣ ಕಾಶ್ಮೀರದಲ್ಲಿ ಶೋಪಿಯಾನ್‌ನಲ್ಲಿಯೇ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅಮರನಾಥ ರಥಯಾತ್ರೆ ಆರಂಭವಾಗುವ ಬೇಸ್‌ಕ್ಯಾಂಪ್‌ನಲ್ಲಿ ತಾಪಮಾನವು ಮೈನಸ್‌ 7.8 ಡಿಗ್ರಿಯಷ್ಟಿದೆ. ಮಧ್ಯ ಕಾಶ್ಮೀರದ ಗಾಂದರ್‌ಬಲ್‌ ಜಿಲ್ಲೆಯ ಸೋನಮಾರ್ಗ್‌ ಪ್ರವಾಸಿ ತಾಣಗಳಲ್ಲಿ ಕನಿಷ್ಠ ತಾಪಮಾನ 06.3 ಡಿಗ್ರಿಯಷ್ಟಿದೆ. ಕಣಿವೆ ಪ್ರವೇಶದ್ವಾರ ಎಂದೇ ಕರೆಸಿಕೊಳ್ಳುವ ಕ್ವಾಸಿಗಂಡ್‌ನಲ್ಲಿ ಮೈನಸ್‌ 6.3 ಡಿಗ್ರಿ ಸೆಲ್ಸಿಯಸ್‌ ಕೊಕೆರ್‌ನಾಗ್‌ನಲ್ಲಿ ಮೈನಸ್‌ 4 ಡಿಗ್ರಿ ಕುಪ್ವಾರಾದಲ್ಲಿ ಮೈನಸ್‌ 6.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಋತುವಿನಲ್ಲಿ ಕಣಿವೆಯಲ್ಲಿ ಇದುವರೆಗೂ ಯಾವುದೇ ಹಿಮಪಾತವಾಗಿಲ್ಲ. ಜನವರಿ 21ರವರೆಗೂ ಇಡೀ ಕಣಿವೆಯಲ್ಲಿ ಇದೇ ತಾಪಮಾನ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾವು ಇಲ್ಲಿಗೆ ಬರುವ ಮುನ್ನ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದೆವು. ಹಿಮಚ್ಛಾದಿತ ಪ್ರದೇಶಗಳಲ್ಲಿ ಪೊಲೀಸರು ಪಹರೆ ಕಾಯುತ್ತಿರುವ ಕಾರಣ ನಾವು ಪೂರ್ಣವಾಗಿ ಆನಂದಿಸಲು ಸಾಧ್ಯಾವಾಯಿತು. ಪ್ರವಾಸವೂ ಸ್ಮರಣೀಯವಾಗಿದ್ದು ಭದ್ರೆವಾಹಕ್ಕೆ ಮತ್ತೆ ಭೇಟಿ ನೀಡುತ್ತೇವೆ.
–ವಿಶಾಲ್‌ ಶರ್ಮಾ, ಮಹಾರಾಷ್ಟ್ರದ ಪ್ರವಾಸಿಗ
ತಪಾಸಣಾ ಕೇಂದ್ರದಿಂದ ಹಿಡಿದು ಎಲ್ಲ ಕಡೆಗಳಲ್ಲಿ ಪೊಲೀಸರಿಂದ ಅಗತ್ಯ ನೆರವು ಸಿಕ್ಕಿದೆ. ಸ್ಥಳೀಯರ ಸ್ನೇಹಪರ ನಿಲುವಿನಿಂದ ಪ್ರವಾಸದಲ್ಲಿ ಖುಷಿಯಾಗಿರಲು ಸಾಧ್ಯವಾಯಿತು
–ಸತೀಶ್‌ ಸಿಂಗ್‌ ಜಾಧವ್, ಗುಜರಾತ್‌ ಪ್ರವಾಸಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.