ADVERTISEMENT

ಪಾಕ್‌ಗೆ ತೆರಳಿ ಉಗ್ರರಾಗಿ ಮರಳುತ್ತಿರುವ ಕಾಶ್ಮೀರಿ ಯುವಕರು: ಅಧಿಕಾರಿಗಳ ಆತಂಕ

ಪಿಟಿಐ
Published 1 ಆಗಸ್ಟ್ 2021, 16:23 IST
Last Updated 1 ಆಗಸ್ಟ್ 2021, 16:23 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಶ್ರೀನಗರ: ಕಾಶ್ಮೀರದ ಯುವಕರು ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದನೆ ತರಬೇತಿ ಪಡೆದು ಭಾರತಕ್ಕೆ ವಾಪಸಾಗುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಭದ್ರತಾಪಡೆಗಳು ಹತ್ಯೆ ಮಾಡಿದ್ದ ಉಗ್ರ ಶಾಕಿರ್ ಅಲ್ತಾಫ್‌ ಭಟ್ ಅಧಿಕೃತ ಪಾಸ್‌ಪೋರ್ಟ್‌ನೊಂದಿಗೆ 2018ರಲ್ಲಿ ಅಧ್ಯಯನಕ್ಕೆಂದು ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ಭಯೋತ್ಪಾದಕನಾಗಿ ದೇಶಕ್ಕೆ ಮರಳಿದ್ದ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2015ರಿಂದ 2019ರ ಅವಧಿಯಲ್ಲಿ ಪಾಸ್‌ಪೋರ್ಟ್‌ ಪಡೆದವರ ಪೈಕಿ ಸುಮಾರು 40 ಯುವಕರು ಅಧ್ಯಯನಕ್ಕೆಂದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ತೆರಳಿದ್ದರು. ಈ ಪೈಕಿ 28 ಮಂದಿ ತರಬೇತಿ ಪಡೆದ ಭಯೋತ್ಪಾದಕರಾಗಿ ಭಾರತಕ್ಕೆ ನುಸುಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಇದಲ್ಲದೆ, ಕಳೆದ ಮೂರು ವರ್ಷಗಳಲ್ಲಿ 100ಕ್ಕೂ ಹೆಚ್ಚು ಕಾಶ್ಮೀರಿ ಯುಕವರು ಅಧಿಕೃತ ವೀಸಾದೊಂದಿಗೆ ಕಿರು ಅವಧಿಗೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇವರ್‍ಯಾರೂ ಮರಳಿ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.

ಇವರೆಲ್ಲ ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‌ಗಳಾಗಿರಬಹುದು ಎಂದು ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಜುಲೈ 24ರಂದು ಬಂಡಿಪೊರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಲ್ತಾಫ್‌ ಭಟ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಪೈಕಿ, ಭಟ್ ಸ್ಥಳೀಯ ನಿವಾಸಿಯೇ ಆಗಿದ್ದ.

ಕಳೆದ ವರ್ಷ ಏಪ್ರಿಲ್ 1ರಿಂದ 6ರ ಅವಧಿಯಲ್ಲಿ ಶೋಪಿಯಾನ್, ಕುಲ್ಗಾಂ, ಅನಂತ್‌ನಾಗ್ ಜಿಲ್ಲೆಗಳ ಕೆಲವು ಯುವಕರು ಭಯೋತ್ಪಾದಕರ ಜತೆ ದೇಶದ ಗಡಿಯೊಳಕ್ಕೆ ನುಸುಳಿದ್ದರು. ಇವರೆಲ್ಲ ಅಧಿಕೃತ ದಾಖಲೆಗಳೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದವರು ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.