ADVERTISEMENT

ಅತ್ಯಾಚಾರ ಸಂತ್ರಸ್ತೆಯರ ಪರಿಹಾರ ನಿಧಿಗೆ ಠೇವಣಿ ವರ್ಗ: ದೆಹಲಿ ಹೈಕೋರ್ಟ್ ನಿರ್ದೇಶನ

ಕಥುವಾ ಸಾಮೂಹಿಕ ಅತ್ಯಾಚಾರ ಪ್ರಕರಣ ಗುರುತು ಬಹಿರಂಗಪಡಿಸಿದ ಪ್ರಮಾದ

ಪಿಟಿಐ
Published 16 ಫೆಬ್ರುವರಿ 2023, 12:22 IST
Last Updated 16 ಫೆಬ್ರುವರಿ 2023, 12:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕಥುವಾದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ 8 ವರ್ಷದ ಬಾಲಕಿಯ ಗುರುತು ಬಹಿರಂಗಪಡಿಸಿದ ಪ್ರಮಾದಕ್ಕೆ ಮಾಧ್ಯಮ ಸಂಸ್ಥೆಗಳಿಂದ ಠೇವಣಿ ಇರಿಸಿದ್ದ ಮೊತ್ತವನ್ನು ಜಮ್ಮು ಮತ್ತು ಕಾಶ್ಮೀರದ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಕಾನೂನು ಪರಿಹಾರ ನಿಧಿಗೆ ವರ್ಗಾಯಿಸುವಂತೆ ಗುರುವಾರ ದೆಹಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ.

ಕಥುವಾ ಪ್ರಕರಣ ಸಂಬಂಧ ಎರಡು ಮಾಧ್ಯಮ ಸಂಸ್ಥೆಗಳಿಂದ ಇತ್ತೀಚೆಗೆ ತಲಾ ₹10 ಲಕ್ಷದಂತೆ ಒಟ್ಟು ₹20 ಲಕ್ಷವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿತ್ತು. ಇದರ ಜತೆಗೆ, ಈ ಹಿಂದೆ ಇತರ ಪ್ರಕರಣಗಳಲ್ಲಿ ಇಟ್ಟಿರುವ ಠೇವಣಿ ಹಣವನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ವಹಿಸುವ ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್ ಅವರಿದ್ದ ಪೀಠವು, ಹೈಕೋರ್ಟ್‌ ಜನರಲ್‌ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.

2018ರ ಜನವರಿ 10ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿಯ ಹಳ್ಳಿಯಲ್ಲಿ ತನ್ನ ಮನೆ ಬಳಿಯಿಂದ ಎಂಟು ವರ್ಷದ ಬಾಲಕಿ ಕಣ್ಮರೆಯಾಗಿದ್ದಳು. ವಾರದ ನಂತರ ಅದೇ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಬಾಲಕಿಯನ್ನು ಕೊಲ್ಲುವ ಮೊದಲು ಅಪಹರಿಸಿ, ಮಾದಕ ದ್ರವ್ಯ ನೀಡಿ, ಪೂಜಾ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಇದು ಪೊಲೀಸ್‌ ತಖೆಯಲ್ಲಿ ದೃಢಪಟ್ಟಿತ್ತು. ‌‌

ADVERTISEMENT

ಈ ಪ್ರಕರಣ ಕುರಿತು ವರದಿ ಮಾಡುವಾಗ ಕೆಲವು ಮಾಧ್ಯಮಗಳು ಸಂತ್ರಸ್ತ ಮೃತ ಬಾಲಕಿಯ ಗುರುತು ಬಹಿರಂಗಪಡಿಸಿದ್ದವು. 2018ರ ಏಪ್ರಿಲ್‌ನಲ್ಲಿ ಕೆಲವು ಮಾಧ್ಯಮಗಳಲ್ಲಿ ಬಂದಿದ್ದ ವರದಿಗಳನ್ನು ಗಮನಿಸಿದ ಹೈಕೋರ್ಟ್‌, ‘ಸಂತ್ರಸ್ತೆಯ ಚಿತ್ರ ಮತ್ತು ಗುರುತುಗಳನ್ನು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಹಿರಂಗಪಡಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ದುಃಖಕರ’ ಎಂದು ಬೇಸರ ವ್ಯಕ್ತಪಡಿಸಿತ್ತು. ಸಂಬಂಧಿಸಿದ ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಮಾಧ್ಯಮ ಸಂಸ್ಥೆಗಳು ಕ್ಷಮೆಯಾಚಿಸಿದ್ದವು.

ಐಪಿಸಿಯ ಸೆಕ್ಷನ್ 228 ಎ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ 23ರ ಪ್ರಕಾರ, ಲೈಂಗಿಕ ಅಪರಾಧಕ್ಕೆ ತುತ್ತಾದವರ ಗುರುತು ಬಹಿರಂಗಪಡಿಸುವುದು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವುದು ದಂಡ ಮತ್ತು ಗರಿಷ್ಠ ಎರಡು ವರ್ಷಗಳವರೆಗಿನ ಜೈಲು ಶಿಕ್ಷಾರ್ಹ ಅಪರಾಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.