ADVERTISEMENT

20ಕ್ಕೆ ಕೆಸಿಆರ್‌–ಉದ್ಧವ್ ಭೇಟಿ | ಒಕ್ಕೂಟ ವ್ಯವಸ್ಥೆ ರಕ್ಷಣೆ ಉದ್ದೇಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 21:10 IST
Last Updated 16 ಫೆಬ್ರುವರಿ 2022, 21:10 IST
 ಕೆ.ಚಂದ್ರಶೇಖರ ರಾವ್
ಕೆ.ಚಂದ್ರಶೇಖರ ರಾವ್   

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಫೆ.20ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ. ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ತಾವು ಆರಂಭಿಸಿರುವ ಅಭಿಯಾನದ ಭಾಗವಾಗಿ ಕೆಸಿಆರ್ ಅವರು ಠಾಕ್ರೆ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಶಿವಸೇನಾ ಮುಖ್ಯಸ್ಥರೂ ಆಗಿರುವ ಠಾಕ್ರೆ ಅವರು ಕೆಸಿಆರ್ ಅವರಿಗೆ ಬುಧವಾರ ದೂರವಾಣಿ ಕರೆ ಮಾಡಿ, ಮುಂಬೈಗೆ ಬರುವಂತೆ ಆಹ್ವಾನಿಸಿದರು ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಬಿಜೆಪಿ ನೀತಿಗಳ ವಿರುದ್ಧ ಹೋರಾಟ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವ ರಾವ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಠಾಕ್ರೆ ಘೋಷಿಸಿದ್ದಾರೆ. ಕೆಸಿಆರ್ ಜೊತೆಗೆ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಠಾಕ್ರೆ ತಿಳಿಸಿದ್ದಾರೆ. ವಿಭಜಕ ಶಕ್ತಿಗಳಿಂದ ದೇಶವನ್ನು ರಕ್ಷಿಸಲು ಸೂಕ್ತ ಸಮಯದಲ್ಲಿ ಕೆಸಿಆರ್ ಮುಂದಾಗಿದ್ದಾರೆ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿ ವಿರುದ್ಧದ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ಕೆಸಿಆರ್ ಭಾನುವಾರ ತಿಳಿಸಿದ್ದರು. ಈ ಹೋರಾಟದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಕಲೆಹಾಕಲು ಮುಂದಾಗಿದ್ದೇನೆ ಎಂದು ಅವರು ಹೇಳಿದ್ದರು.

ದೇವೇಗೌಡ, ಮಮತಾ ಬೆಂಬಲ:ಒಕ್ಕೂಟ ವ್ಯವಸ್ಥೆ ರಕ್ಷಣೆಗಾಗಿ ಆರಂಭಿಸಿರುವ ಹೋರಾಟವನ್ನು ಬೆಂಬಲಿಸಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕೆಸಿಆರ್ ಅವರಿಗೆ ಮಂಗಳವಾರಕರೆ ಮಾಡಿದ್ದರು. ಇದೇ ವಿಚಾರವಾಗಿ ಚರ್ಚಿಸಲು ಬೆಂಗಳೂರಿಗೆ ಬರುವುದಾಗಿ ದೇವೇಗೌಡ ಅವರಿಗೆ ಕೆಸಿಆರ್ ತಿಳಿಸಿದ್ದರು.

ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಹೇಳಿದ್ದರು. ಈ ಕುರಿತು ಮಾತನಾಡಲು ಮಮತಾ ಅವರು ಸದ್ಯದಲ್ಲೇ ಹೈದರಾಬಾದ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.