ADVERTISEMENT

ಲೈಂಗಿಕ ಶೋಷಣೆ: ರಾಹುಲ್ ಗಾಂಧಿ ಆಪ್ತ ಕೆ.ಸಿ ವೇಣುಗೋಪಾಲ್‌ಗೆ ಸಿಬಿಐ ಡ್ರಿಲ್

ಐಎಎನ್ಎಸ್
Published 17 ಆಗಸ್ಟ್ 2022, 4:21 IST
Last Updated 17 ಆಗಸ್ಟ್ 2022, 4:21 IST
ಕೆ.ಸಿ ವೇಣುಗೋಪಾಲ್‌
ಕೆ.ಸಿ ವೇಣುಗೋಪಾಲ್‌   

ನವದೆಹಲಿ: ಕೇರಳಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿರುವುದು ಬೆಳಕಿಗೆ ಬಂದಿದೆ.

ನವದೆಹಲಿಯಲ್ಲಿ ಕಳೆದ ವಾರ ಅನೇಕ ಗಂಟೆಗಳ ಕಾಲ ವೇಣುಗೋಪಾಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಸಿಬಿಐ ಮೂಲಗಳು ಮಂಗಳವಾರ ಮಾಧ್ಯಮಗಳಿಗೆ ತಿಳಿಸಿವೆ.

2012 ರಲ್ಲಿ ಬೆಳಕಿಗೆ ಬಂದಿದ್ದ ಸೋಲಾರ್ ಎನರ್ಜಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆಮಹಿಳೆಯೊಬ್ಬರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೇರಳ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸುತ್ತಿತ್ತು.

ADVERTISEMENT

ಈ ಮಧ್ಯೆಸೋಲಾರ್ ಹಗರಣ ಕೇರಳದಲ್ಲಿ ಸಾಕಷ್ಟು ಸದ್ದು ಮಾಡಿದ್ದರಿಂದ ಸಿಎಂ ಪಿಣರಾಯಿ ವಿಜಯನ್ ಅವರು ಕಳೆದ ವರ್ಷ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದರು.

ಮಹಿಳೆ ಹೇಳಿಕೆ ಆಧರಿಸಿ ಕೆ.ಸಿ ವೇಣುಗೋಪಾಲ್, ಮಾಜಿ ಸಿಎಂ ಉಮ್ಮನ್ ಚಾಂಡಿ, ಸಂಸದ ಹಿಬಿ ಇದನ್, ಮಾಜಿ ಸಚಿವ ಎ.ಪಿ ಅನಿಲ್ ಕುಮಾರ್, ಸಂಸದ ಅಡೂರ್ ಪ್ರಕಾಶ್ ಹಾಗೂ ಬಿಜೆಪಿ ಮುಖಂಡ ಎ.ಪಿ ಅಬ್ದುಲ್ ಕುಟ್ಟಿ ಸೇರಿದಂತೆ ಒಟ್ಟು ಆರು ಜನರ ಮೇಲೆ ಲೈಂಗಿಕ ಶೋಷಣೆ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದೇ ಮೊದಲ ಬಾರಿಗೆ ಪ್ರಮುಖ ಆರೋಪಿ ವೇಣುಗೋಪಾಲ್ ಅವರನ್ನು ಸುದೀರ್ಘ ವಿಚಾರಣೆ ನಡೆಸಿದೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ಕೆ.ಸಿ ವೇಣುಗೋಪಾಲ್ ಅವರು ಕರ್ನಾಟಕ ಕಾಂಗ್ರೆಸ್‌ನ ಮಾಜಿ ಉಸ್ತುವಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.