ADVERTISEMENT

77th Independence Day: ರಾಜಸ್ಥಾನಿ ಬಾಂಧನಿ ರುಮಾಲು ತೊಟ್ಟ ಪ್ರಧಾನಿ ಮೋದಿ

ಪಿಟಿಐ
Published 15 ಆಗಸ್ಟ್ 2023, 6:40 IST
Last Updated 15 ಆಗಸ್ಟ್ 2023, 6:40 IST
   

ನವದೆಹಲಿ: ಪ್ರಧಾನಿಯಾದ ಬಳಿಕ ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಶೈಲಿಯ ರುಮಾಲು ತೊಡುವ ಸಂಪ್ರದಾಯವನ್ನು ನರೇಂದ್ರ ಮೋದಿ ಅವರು ಈ ಬಾರಿಯೂ ಮುಂದುವರಿಸಿದ್ದು, ರಾಜಸ್ಥಾನದ ಬಣ್ಣಬಣ್ಣಗಳ ರುಮಾಲು ಈ ಬಾರಿಯ ಅವರ ಆಯ್ಕೆಯಾಗಿತ್ತು.

ಐತಿಹಾಸಿಕ ಕೆಂಪುಕೋಟೆಯಲ್ಲಿ 10ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಅವರು ರಾಜಸ್ಥಾನಿ ಶೈಲಿಯ ಪೇಟವನ್ನು ತೊಟ್ಟು ಭಾಷಣ ಮಾಡಿದರು. 

ಬಾಂಧನಿ ಚಿತ್ರಗಳುಳ್ಳ ಈ ರುಮಾಲಿನಲ್ಲಿ ಹಳದಿ, ಹಸಿರು, ಕೆಂಪು ಬಣ್ಣಗಳನ್ನು ಢಾಳವಾಗಿ ಬಳಸಲಾಗಿದೆ. ಬಿಳಿ ಕುರ್ತಾ ಹಾಗೂ ಕಪ್ಪು ವಿ–ನೆಕ್‌ ಜಾಕೆಟ್ ತೊಟ್ಟಿದ್ದ ಪ್ರಧಾನಿ ಮೋದಿ ಅವರ ತಲೆ ಮೇಲಿನ ಬಣ್ಣಬಣ್ಣದ ರುಮಾಲು ಎದ್ದು ಕಾಣುವಂತಿತ್ತು. ‌

ADVERTISEMENT
ಪ್ರಧಾನಿ ಆದ ಬಳಿಕ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಬಗೆಯ ರುಮಾಲು ತೊಟ್ಟು ಭಾಷಣ ಮಾಡಿದ ನರೇಂದ್ರ ಮೋದಿ

ರಾಜಸ್ಥಾನ ಚುನಾವಣೆ ಸಮೀಪಿಸುತ್ತಿರುವುದರಿಂದ ಅಲ್ಲಿನ ರುಮಾಲನ್ನು ಪ್ರಧಾನಿ ತೊಟ್ಟಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಮೈಕ್ರೊ ಬ್ಲಾಗಿಂಗ್ ಎಕ್ಸ್‌ (ಟ್ವಿಟರ್)ನಲ್ಲೂ ಈ ಕುರಿತು ಚರ್ಚೆಗಳು ನಡೆದವು.

ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲೂ ದೇಶದ ವಿವಿಧ ಭಾಗಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರುಮಾಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುತ್ತಾ ಬಂದಿದ್ದಾರೆ.

2014ರಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಮೋದಿ ವಿಶಿಷ್ಟ ಬಗೆಯ ಉಡುಪು, ರುಮಾಲುಗಳನ್ನು ತೊಡುತ್ತ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ಬಿಳಿ ಬಣ್ಣದ ರುಮಾಲು ಮೇಲೆ ತ್ರಿವರ್ಣದ ಪಟ್ಟಿ ಇರುವ ರುಮಾಲು ತೊಟ್ಟಿದ್ದರು. ಬಿಳಿ ಕುರ್ತಾ–ಪೈಜಾಮ ಮೇಲೆ ನೀಲಿ ಬಣ್ಣದ ವೇಸ್ಟ್‌ಕೋಟ್ ತೊಟ್ಟಿದ್ದರು.

2021ರಲ್ಲಿ ಕೊಲ್ಹಾಪುರಿ ಪೇಟ ತೊಟ್ಟಿದ್ದರು. 2020ರಲ್ಲಿ ಕಿತ್ತಳೆ ಹಾಗೂ ಹಳದಿ ಬಣ್ಣದ ರುಮಾಲು ತೊಟ್ಟಿದ್ದರು. 2019ರಲ್ಲಿ ಕಿತ್ತಳೆ ಹಾಗೂ ಹಸಿರು ಬಣ್ಣದ ರುಮಾಲು ಧರಿಸಿದ್ದರು. 2018ರಲ್ಲಿ ಕೆಂಪು ಮತ್ತು ಕೇಸರಿ ಬಣ್ಣದ ರುಮಾಲು ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. 

ಇದನ್ನೂ ಓದಿ: Independence Day | ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಮುಖ್ಯಾಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.