
ಅಹಮದಾಬಾದ್: ‘ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ₹50 ಕೋಟಿ ವೆಚ್ಚ ಮಾಡಿದ್ದು, ಈ ಪೈಕಿ ₹2 ಕೋಟಿಯನ್ನು ಸಮೋಸಗಳಿಗೆ ಖರ್ಚು ಮಾಡಲಾಗಿದೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇದಿಯಾಪಾಡ ಕ್ಷೇತ್ರದ ಎಎಪಿ ಶಾಸಕ ಚೈತರ್ ವಾಸವ ಅವರು ಆರ್‌ಟಿಐ ಅಡಿ ಪಡೆದ ಮಾಹಿತಿಯನ್ನು ಉಲ್ಲೇಖಿಸಿ ಕೇಜ್ರಿವಾಲ್ ಈ ಆರೋಪ ಮಾಡಿದ್ದಾರೆ.
ಮೂರು ದಿನಗಳ ಗುಜರಾತ್ ಭೇಟಿಯ ಕೊನೆಯ ದಿನವಾದ ವಡೋದರಾದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನವೆಂಬರ್ 15ರಂದು ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಜನಜಾತೀಯ ಗೌರವ ದಿವಸ’ ಕಾರ್ಯಕ್ರಮಕ್ಕಾಗಿ ನರ್ಮದಾ ಜಿಲ್ಲಾಡಳಿತವು ಸುಮಾರು ₹50 ಕೋಟಿ ಖರ್ಚು ಮಾಡಿದೆ. ಈ ಪೈಕಿ ಪೆಂಡಾಲ್‌ಗಳಿಗೆ ₹5 ಕೋಟಿ, ಬಸ್ ವ್ಯವಸ್ಥೆಗೆ ₹7 ಕೋಟಿ, ಸಮೋಸಗಳಿಗೆ ₹2 ಕೋಟಿ ಖರ್ಚು ಮಾಡಲಾಗಿದೆ. ಬುಡಕಟ್ಟು ನಿಧಿಯಿಂದ ಪಡೆದ ₹2 ಕೋಟಿ ಮೊತ್ತದ ಸಮೋಸಗಳನ್ನು ಯಾರು ತಿಂದರು’ ಎಂದು ಪ್ರಶ್ನಿಸಿದ್ದಾರೆ.
‘ಮೋದಿ ಅವರು ಸಮೋಸಗಳಿಗೆ ₹20 ಕೋಟಿ ಅಥವಾ ₹30 ಕೋಟಿ ಖರ್ಚು ಮಾಡಬಹುದಿತ್ತು. ಆದರೆ, ಕೇಂದ್ರ ಸರ್ಕಾರದ ಹಣವನ್ನು ಏಕೆ ಖರ್ಚು ಮಾಡಲಿಲ್ಲ? ₹2 ಕೋಟಿ ಮೊತ್ತದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಅನೇಕ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಬಹುದಿತ್ತು’ ಎಂದು ಹೇಳಿದ್ದಾರೆ.
‘ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಬುಡಕಟ್ಟು ಪ್ರದೇಶಗಳು ಏಕೆ ಹಿಂದುಳಿದಿವೆ? ನಾವು ಹಣವನ್ನು ಪ್ರಾಮಾಣಿಕವಾಗಿ ಖರ್ಚು ಮಾಡಿದರೆ ಸುಸಜ್ಜಿತ ಆಸ್ಪತ್ರೆಗಳು ಹಾಗೂ ಶಾಲೆಗಳನ್ನು ನಿರ್ಮಿಸಬಹುದು. ಉಚಿತ ವಿದ್ಯುತ್, ರಸ್ತೆ ಸೌಕರ್ಯ ಒದಗಿಸಬಹುದು’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.