ADVERTISEMENT

ದೆಹಲಿ ಜಲ ಮಂಡಳಿ ಕಚೇರಿ ಮೇಲೆ ದಾಳಿ: ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲು

ಏಜೆನ್ಸೀಸ್
Published 25 ಡಿಸೆಂಬರ್ 2020, 13:47 IST
Last Updated 25 ಡಿಸೆಂಬರ್ 2020, 13:47 IST
ರಾಘವ್‌ ಛಡ್ಡಾ
ರಾಘವ್‌ ಛಡ್ಡಾ   

ನವದೆಹಲಿ: ದೆಹಲಿ ಜಲ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ವಿರುದ್ಧ ಎಎಪಿ ನಾಯಕ ರಾಘವ್‌ ಛಡ್ಡಾ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾನೂನುಬಾಹಿರವಾಗಿ ಸಭೆ ಸೇರಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ಇದಕ್ಕೆ ದೆಹಲಿ ಘಟಕದ ಬಿಜೆಪಿ ಅಧ್ಯಕ್ಷ ಸೇರಿದಂತೆ ಹಲವು ಮುಖಂಡರ ಬೆಂಬಲವಿದೆ ಎಂದು ರಾಘವ್‌ ಛಡ್ಡಾ ಆರೋಪಿಸಿದ್ದಾರೆ.

ಆಮ್‌ ಆದ್ಮಿ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ನಾಯಕರು ಗುರುವಾರ ಆರೋಪಿಸಿದ್ದರು.

ADVERTISEMENT

ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಾಘವ್‌ ಛಡ್ಡಾ 'ವಿಡಿಯೊ ಟ್ವೀಟ್‌' ಮಾಡುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.

ಈ ವಿಚಾರವಾಗಿ ಗುರುವಾರ ಸಂಜೆ ಟ್ವೀಟ್‌ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, 'ನಮ್ಮ ಕೊನೆಯ ಉಸಿರಿನವರೆಗೂ ರೈತರೊಂದಿಗೆ ನಾವು ನಿಲ್ಲಲಿದ್ದೇವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ದಾಳಿಯಿಂದ ಎಎಪಿ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ರೈತರಿಗೆ ಬೆಂಬಲ ಸೂಚಿಸುತ್ತೇನೆ' ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.