ADVERTISEMENT

ಎರಡು ತಿಂಗಳ ಬಳಿಕ ಪತ್ನಿ, ಮಗುವನ್ನು ಕಣ್ತುಂಬಿಕೊಂಡ ಆಂಬುಲೆನ್ಸ್‌ ಚಾಲಕ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 15:22 IST
Last Updated 9 ಜುಲೈ 2020, 15:22 IST
ಫೈಜಲ್‌ ಕಬೀರ್
ಫೈಜಲ್‌ ಕಬೀರ್   

ತಿರುವನಂತಪುರ:ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಆಂಬುಲೆನ್ಸ್‌ ಚಾಲಕರೊಬ್ಬರು ಎರಡು ತಿಂಗಳ ನಂತರ ಪತ್ನಿ ಮತ್ತು ಮಗುವನ್ನು ದೂರದಲ್ಲೇ ನಿಂತು ಕಣ್ತುಂಬಿಕೊಂಡಿರುವ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ.

ಚಾಲಕ ಫೈಜಲ್‌ ಕಬೀರ್‌ (29) ಅವರು ಸುರಕ್ಷತೆಯ ದೃಷ್ಟಿಯಿಂದ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾರೆ. ಒಂದು ವರ್ಷದ ಮಗು ಮತ್ತು ಪ್ರೀತಿಯ ಮಡದಿಯನ್ನು ನೋಡುವ ತವಕ ಅವರಿಗೆ.ಆದರೆ, ಸೋಂಕಿತರ ಸೇವೆಯಲ್ಲಿರುವ ಅವರಿಗೆ ಮನೆಗೆ ಹೋಗಲಾಗದಂತಹ ಪರಿಸ್ಥಿತಿ.

ಎರ್ನಾಕುಳಂನಲ್ಲಿ ಕರ್ತವ್ಯದಲ್ಲಿರುವ ಫೈಜಲ್‌ ಕೆಲಸದ ನಿಮಿತ್ತ ತಿರುವನಂತಪುರಕ್ಕೆ ಹೋಗಿದ್ದರು. ಅಲ್ಲಿಂದ ತೆರಳುವಾಗ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ನಿಗೆ ಬರುವಂತೆ ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ಪತ್ನಿಯನ್ನು ಕಂಡು ದೂರದಿಂದಲೇ ಸಂಭಾಷಣೆ ನಡೆಸಿದ್ದಾರೆ. ಈ ಪ್ರೀತಿಗೆ ಸಾಕ್ಷಿ ಆಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಯನ್ನು ಗಳಿಸಿಕೊಂಡಿದೆ.

ADVERTISEMENT

‘ಆಂಬುಲೆನ್ಸ್‌ ನಿಲ್ಲಿಸಿ, ಪತ್ನಿ, ಮಗು ಕಂಡಾಗ ಅವರ ಸಮೀಪ ಹೋಗುವ ಆಸೆಯಾಯಿತು. ಆದರೆ, ಸೋಂಕು ಹರಡುವ ಭೀತಿಯಿಂದ ದೂರವೇ ಉಳಿದೆ. ನಾನು ಮಗುವನ್ನು ಮುದ್ದಿಸದೆ ನಾಲ್ಕು ತಿಂಗಳೇ ಆಗಿದೆ. ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದೇನೆ’ ಎಂದು ಫೈಜಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.