ತಿರುವನಂತಪುರಂ: ‘ಕೇರಳ ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಕಟುವಾಗಿ ಟೀಕಿಸಿದ್ದಾರೆ. ಅವರ ಹೇಳಿಕೆಗಳು ಅತ್ಯಂತ ಪ್ರಚೋದನಕಾರಿ ಹಾಗೂ ಖಂಡನೀಯ ಎಂದು ಹೇಳಿದ್ದಾರೆ.
ಕೇರಳದ ಬಗೆಗಿನ ಸಂಘ ಪರಿವಾರದ ಧೋರಣೆಯು ಮಹಾರಾಷ್ಟ್ರ ಸಚಿವರ ಹೇಳಿಕೆಯ ಮೂಲಕ ಬಯಲಾಗಿದೆ. ಎಲ್ಲೆಲ್ಲಿ ತಮ್ಮ ಪ್ರಭಾವ ಬೀರಲು ಸಾಧ್ಯವಿಲ್ಲವೋ ಅಂತಹ ಪ್ರದೇಶಗಳಲ್ಲಿ ದ್ವೇಷ ಹರಡಿ, ಮೂಲೆಗುಂಪು ಮಾಡಬೇಕೆನ್ನುವುದು ಸಂಘ ಪರಿವಾರದ ನಂಬಿಕೆ. ಅದರ ಭಾಗವಾಗಿಯೇ ಈ ರೀತಿಯ ಹೇಳಿಕೆಗಳು ಬಂದಿವೆ ಎಂದು ಹೇಳಿದ್ದಾರೆ.
‘ದ್ವೇಷ ಭಾಷಣ ಮಾಡಿದ ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಸಚಿವರೊಬ್ಬರು ಸಂವಿಧಾನಕ್ಕೆ ಅಪಮಾನ ಮಾಡಿದ್ದರೂ ದೇಶದ ನಾಯಕತ್ವ ವಹಿಸಿದವರು ಪ್ರತಿಕ್ರಿಯಿಸಿದಿರುವುದು ಆಶ್ಚರ್ಯಕರ ಸಂಗತಿ’ ಎಂದು ಹೇಳಿದ್ದಾರೆ.
'ಇಂತಹ ವಾಕ್ಚಾತುರ್ಯವು ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಭದ್ರಕೋಟೆಯಾಗಿರುವ ಕೇರಳದ ವಿರುದ್ಧ ಸಂಘಪರಿವಾರ ನಡೆಸುತ್ತಿರುವ ದ್ವೇಷ ಅಭಿಯಾನಗಳನ್ನು ಪ್ರತಿಬಿಂಬಿಸುತ್ತದೆ. ಕೇರಳದ ಮೇಲಿನ ಈ ಹೀನ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಸಂಘಪರಿವಾರದ ದ್ವೇಷಪೂರಿತ ಪ್ರಚಾರದ ವಿರುದ್ಧ ಎಲ್ಲಾ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳು ಒಂದಾಗಬೇಕು' ಎಂದು ಪಿಣರಾಯಿ ವಿಜಯನ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪುಣೆಯ ಪುರಂದರಲ್ಲಿ ನಡೆದ ‘ಶಿವ ಪ್ರತಾಪ್ ದಿವಸ’ ಕಾರ್ಯಕ್ರಮದಲ್ಲಿ ಮಾತನಾಡಿದ, ಅವರು, ‘ಕೇರಳ ಒಂದು ಮಿನಿ ಪಾಕಿಸ್ತಾನ. ಅದಕ್ಕೇ ಅಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಿಗೆ ಮತ ಹಾಕಿದವರು ಭಯೋತ್ಪಾದಕರು’ ಎಂದು ಹೇಳಿದ್ದರು.
ತಮ್ಮ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿದ್ದ ಅವರು, ‘ಕೇರಳ ಕೂಡ ನಮ್ಮ ದೇಶದ ಭಾಗವೇ ಹೌದು. ಅಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಎಲ್ಲರೂ ಆತಂಕಪಡಬೇಕು. ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಗಳಿಗೆ ಅಲ್ಲಿ ನಿತ್ಯ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ವಿಷಯದಲ್ಲಿ ಹೇಗೆ ವರ್ತಿಸುತ್ತಿದ್ದಾರೆಯೋ ಅದೇ ಪರಿಸ್ಥಿತಿ ಮುಂದೆ ಕೇರಳದಲ್ಲಿ ಉದ್ಭವಿಸಲಿದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ' ಎಂದು ಸಮರ್ಥಿಸಿಕೊಂಡಿದ್ದರು.
ರಾಣೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಸಚಿವರ ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.